ಮೈಸೂರು: ವೈಯಕ್ತಿಕ ದ್ವೇಷದ ಹಿನ್ನೆಲೆಯಲ್ಲಿ ವ್ಯಕ್ತಿಯೋರ್ವ ಬರ್ಬರವಾಗಿ ಹತ್ಯೆಯಾಗಿರುವ ಘಟನೆಯೊಂದು ನಡೆದಿದೆ.

ಜಿಲ್ಲೆಯ ವರುಣ ಗ್ರಾಮದ ಹೊರವಲಯದ ಹೋಟೆಲ್ ಬಳಿ ಈ ಘಟನೆ ನಡೆದಿದೆ. ಕಾರ್ತಿಕ್ ಎಂಬಾತನನ್ನು ಮಾರಕಾಸ್ತ್ರಗಳಿಂದ ಕೊಚ್ಚಿ ದುಷ್ಕರ್ಮಿಗಳು ಕೊಲೆ ಮಾಡಿದ್ದಾರೆ. ಕೊಲೆಯಾಗಿರುವ ಕಾರ್ತಿಕ್ ಮೈಸೂರು ನಗರದ ಕ್ಯಾತಮಾರನಹಳ್ಳಿ ನಿವಾಸಿ ಎನ್ನಲಾಗಿದೆ. ವೈಯಕ್ತಿಕ ದ್ವೇಷದ ಹಿನ್ನೆಲೆಯಲ್ಲಿ ಹತ್ಯೆ ಮಾಡಿರುವ ಶಂಕೆ ವ್ಯಕ್ತವಾಗಿದೆ.
ಬೈಕ್ ಹಾಗೂ ಕಾರಿನಲ್ಲಿ ಬಂದಿದ್ದ ಐವರು ಜನರ ತಂಡ ಈ ದೃಷ್ಕೃತ್ಯ ಎಸಗಿದೆ. ಭಾನುವಾರ ರಾತ್ರಿ ಈ ದುರ್ಘಟನೆ ಸಂಭವಿಸಿದೆ. ವ್ಯಕ್ತಿಯನ್ನು ಕೊಲೆ ಮಾಡುವ ದೃಶ್ಯಗಳು ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿವೆ. ಈ ಕುರಿತು ವರುಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಕೈಗೊಂಡಿದ್ದಾರೆ.