ಇಸ್ಲಾಮಾಬಾದ್: ಉಗ್ರ ಪೋಷಣೆಯ ಪಾಕಿಸ್ತಾನಕ್ಕೆ ಜಾಗತಿಕ ಮಟ್ಟದಲ್ಲಿ ಭಾರಿ ಹಿನ್ನಡೆಯಾಗಿದೆ. ಭಾರತದ ಸತತ ದಾಳಿಯಿಂದ ಕಂಗೆಟ್ಟು, ಕೊನೆಗೆ ಅಮೆರಿಕದ ಕಾಲು ಹಿಡಿದು, ಕದನವಿರಾಮಕ್ಕೆ ಅಂಗಲಾಚಿದ್ದ ಪಾಕಿಸ್ತಾನ ಎಂತಹ ದೇಶ ಎಂಬುದು ಜಾಗತಿಕವಾಗಿ ಸಾಬೀತಾಗಿದೆ. ಪಾಕಿಸ್ತಾನದ ಸುಮಾರು 5 ಸಾವಿರಕ್ಕೂ ಅಧಿಕ ಭಿಕ್ಷುಕರನ್ನು ಮುಸ್ಲಿಂ ರಾಷ್ಟ್ರಗಳೇ ಹೊರದಬ್ಬಿವೆ. ಆ ಮೂಲಕ ಪಾಕಿಸ್ತಾನಿಯರನ್ನು ಯಾರೂ ನಂಬುವುದಿಲ್ಲ ಎಂಬುದು ಜಗಜ್ಜಾಹೀರಾಗಿದೆ.
ಹೌದು, ಪಾಕಿಸ್ತಾನದ ನ್ಯಾಷನಲ್ ಅಸೆಂಬ್ಲಿಗೇ ಪಾಕ್ ಸರ್ಕಾರವೇ ಈ ಕುರಿತು ಮಾಹಿತಿ ನೀಡಿದೆ. 2024ರಿಂದ ಇದುವರೆಗೆ ಯುಎಇ, ಸೌದಿ ಅರೇಬಿಯಾ ಸೇರಿ ಹಲವು ಮುಸ್ಲಿಂ ರಾಷ್ಟ್ರಗಳು ಪಾಕಿಸ್ತಾನದ 5,402 ಭಿಕ್ಷುಕರನ್ನು ಗಡೀಪಾರು ಮಾಡಿವೆ ಎಂದು ಇತ್ತೀಚೆಗೆ ಲಿಖಿತ ಮಾಹಿತಿ ನೀಡಿದೆ.
ಇರಾಕ್, ಸೌದಿ ಅರೇಬಿಯಾ, ಮಲೇಷ್ಯಾ, ಯುಎಇ, ಕತಾರ್ ಮತ್ತು ಒಮಾನ್ ಸೇರಿದಂತೆ ಹಲವು ದೇಶಗಳಲ್ಲಿ ಪಾಕಿಸ್ತಾನದ ಭಿಕ್ಷುಕರನ್ನು ಗಡೀಪಾರು ಮಾಡಲಾಗಿದೆ. 2024ರಲ್ಲಿ 4,850 ಭಿಕ್ಷುಕರನ್ನು ಮರಳಿ ಪಾಕಿಸ್ತಾನಕ್ಕೆ ಕಳುಹಿಸಲಾಗಿದೆ. ಇವರಲ್ಲಿ 4,498 ಜನರನ್ನು ಸೌದಿ ಅರೇಬಿಯಾದಿಂದ ಮತ್ತು 242 ಜನರನ್ನು ಇರಾಕ್ ನಿಂದ ಓಡಿಸಲಾಗಿದೆ ಎಂದು ವರದಿಯಲ್ಲಿ ತಿಳಿಸಲಾಗಿದೆ.
ಅಷ್ಟೇ ಅಲ್ಲ, ಮಲೇಷ್ಯಾದಿಂದ 55 ಪಾಕಿಸ್ತಾನದ ಭಿಕ್ಷುಕರನ್ನು ವಾಪಸ್ ಕಳುಹಿಸಲಾಗಿದೆ. ಅದೇ ರೀತಿ, ಯುನೈಟೆಡ್ ಅರಬ್ ಎಮಿರೇಟ್ಸ್ ನಿಂದ 49 ಭಿಕ್ಷುಕರು ದೇಶಕ್ಕೆ ಮರಳಿದ್ದಾರೆ. ಕಳೆದ 3 ವರ್ಷಗಳಲ್ಲಿ, ವಿಶ್ವದ ಹಲವು ದೇಶಗಳಲ್ಲಿ ಪಾಕಿಸ್ತಾನದ 50 ಸಾವಿರ ಜನ ಭಿಕ್ಷಾಟನೆಗೆ ಇಳಿದಿದ್ದಾರೆ ಎಂದು ಹೇಳಲಾಗುತ್ತಿದೆ.