ವಾಷಿಂಗ್ಟನ್: ಭಾರತ-ಪಾಕಿಸ್ತಾನ ಸಂಘರ್ಷದ ಸಮಯದಲ್ಲಿ ಚೀನಾ, ಟರ್ಕಿಯಂತೆಯೇ ಅಮೆರಿಕ ಕೂಡ ಭಾರತದ ಬೆನ್ನಿಗೆ ಚೂರಿ ಇರಿಯಿತೇ?
ಇಂಥದ್ದೊಂದು ಪ್ರಶ್ನೆ ಈಗ ಮೂಡಿದೆ. ಜೂನ್ 14ರಂದು ವಾಷಿಂಗ್ಟನ್ ಡಿಸಿಯಲ್ಲಿ ನಡೆಯಲಿರುವ ಅಮೆರಿಕ ಸೇನಾ ದಿನಾಚರಣೆ ಕಾರ್ಯಕ್ರಮಕ್ಕೆ ಅಮೆರಿಕ ಸರ್ಕಾರವು ಪಾಕಿಸ್ತಾನದ ಸೇನಾ ಮುಖ್ಯಸ್ಥ ಜನರಲ್ ಸೈಯದ್ ಅಸೀಮ್ ಮುನೀರ್ ಅಹ್ಮದ್ ಶಾ ಅವರನ್ನು ಆಹ್ವಾನಿಸಿರುವುದೇ ಈ ಪ್ರಶ್ನೆ ಮೂಡಲು ಕಾರಣ.
ಯುಎಸ್ ಆರ್ಮಿ ಡೇ ಆಚರಣೆಗೆ ಮುನೀರ್ ಅವರನ್ನು ಆಹ್ವಾನಿಸಲಾಗಿದೆ ಎಂದು ಗುಪ್ತಚರ ಮೂಲಗಳನ್ನು ಉಲ್ಲೇಖಿಸಿ ರಾಷ್ಟ್ರೀಯ ಸುದ್ದಿವಾಹಿನಿಯೊಂದು ವರದಿ ಮಾಡಿದೆ. ಅಮೆರಿಕ ಸೇನೆಯ 250ನೇ ವಾರ್ಷಿಕೋತ್ಸವದ ಹಿನ್ನೆಲೆಯಲ್ಲಿ ಜೂನ್ 14ರಂದು ಅದ್ಧೂರಿ ಕಾರ್ಯಕ್ರಮ ಏರ್ಪಡಿಸಲಾಗಿದೆ. ಅದರಲ್ಲಿ ಇತರ ಸೇನಾ ನಾಯಕರೊಂದಿಗೆ ಮುನೀರ್ ಕೂಡ ಭಾಗವಹಿಸಲಿದ್ದಾರೆ. ಪಾಕಿಸ್ತಾನದ ರಾಯಭಾರ ಕಚೇರಿಯ ಮೂಲಗಳ ಪ್ರಕಾರ, ಜನರಲ್ ಮುನೀರ್ ಜೂನ್ 12ರಂದು ವಾಷಿಂಗ್ಟನ್ಗೆ ಆಗಮಿಸಲಿದ್ದಾರೆ ಎಂದು ಹೇಳಲಾಗಿದೆ.
ಇನ್ನೊಂದೆಡೆ, ಮುನೀರ್ ಅವರ ಈ ಭೇಟಿಯ ಸಂದರ್ಭದಲ್ಲಿ ಅಮೆರಿಕವು, ಅಫ್ಘಾನಿಸ್ತಾನ ಮತ್ತು ಭಾರತವನ್ನು ಗುರಿಯಾಗಿಸಿಕೊಂಡು ದಾಳಿ ನಡೆಸುವ ಭಯೋತ್ಪಾದಕ ಗುಂಪುಗಳ ವಿರುದ್ಧ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಲಿದೆ ಎಂದು ಮೂಲಗಳು ತಿಳಿಸಿವೆ. ಅಲ್ಲದೇ ಈ ಆಹ್ವಾನವು ಭಾರತದ ವಿರುದ್ಧದ ಯಾವುದೇ ನಿಲುವಿಗಿಂತಲೂ, ಅಮೆರಿಕ-ಚೀನಾ ಸ್ಪರ್ಧೆಗೆ ಸಂಬಂಧಿಸಿದೆ ಎಂದೂ ಹೇಳಲಾಗುತ್ತಿದೆ
ಚೀನಾ-ಪಾಕಿಸ್ತಾನ ಆರ್ಥಿಕ ಕಾರಿಡಾರ್ (CPEC) ಮತ್ತು ಬೆಲ್ಟ್ ಆಂಡ್ ರೋಡ್ ಇನಿಶಿಯೇಟಿವ್ (BRI) ಮೂಲಕ ಪಾಕಿಸ್ತಾನವು ಚೀನಾದೊಂದಿಗಿನ ನಿಕಟ ಸಂಬಂಧ ಹೊಂದುತ್ತಿದ್ದು, ಈ ಹಿನ್ನೆಲೆಯಲ್ಲಿ ಪಾಕಿಸ್ತಾನವನ್ನು ಒಲಿಸಿಕೊಂಡು, ಅದು ತಟಸ್ಥ ನಿಲುವು ತಳೆಯುವಂತೆ ಮಾಡುವುದು ಅಮೆರಿಕದ ಲೆಕ್ಕಾಚಾರ ಎನ್ನಲಾಗಿದೆ.
ಇದೇ ವೇಳೆ ಜನರಲ್ ಮುನೀರ್ ಅವರ ಅಮೆರಿಕ ಭೇಟಿಗೆ ಪಾಕಿಸ್ತಾನದಲ್ಲಿ ರಾಜಕೀಯ ವಿರೋಧವೂ ಎದುರಾಗಿದೆ. ಪಾಕಿಸ್ತಾನ ತೆಹ್ರಿಕ್-ಇ-ಇನ್ಸಾಫ್ (PTI) ಪಕ್ಷವು ಮುನೀರ್ ಅವರ ಯುಎಸ್ ಭೇಟಿಯ ವಿರುದ್ಧ ಪ್ರತಿಭಟನೆಯನ್ನು ಯೋಜಿಸಿದ್ದು, ಅವರನ್ನು “ಕ್ರಿಮಿನಲ್” ಎಂದು ಬಿಂಬಿಸಿದೆ. ಈ ಭೇಟಿಯು ಅಮೆರಿಕದ ರಾಜಕೀಯ ತಂತ್ರಗಾರಿಕೆಯ ಭಾಗವಾಗಿದೆ ಎಂದೂ ಹೇಳಲಾಗಿದೆ.