ಉತ್ತರಕಾಶಿ: ಉತ್ತರಾಖಂಡದ ಉತ್ತರಕಾಶಿಯ ಧರಾಲಿ ಗ್ರಾಮದಲ್ಲಿ ಸಂಭವಿಸಿದ ಮೇಘಸ್ಫೋಟವು ಭೀಕರ ಮತ್ತು ದಿಢೀರ್ ಪ್ರವಾಹಕ್ಕೆ ಕಾರಣವಾಗಿದ್ದು. ಈ ದುರಂತದಲ್ಲಿ ಸೇನಾ ಶಿಬಿರಕ್ಕೂ ಹಾನಿಯಾಗಿದೆ. ಹಲವಾರು ಮಂದಿ ಅವಶೇಷಗಳ ಅಡಿಯಲ್ಲಿ ಸಿಲುಕಿರುವ ಆತಂಕ ವ್ಯಕ್ತವಾಗಿದೆ. ದುರಂತದ ಸ್ಥಳದಿಂದಲೇ ರೇಡಿಯೊ ಸಂದೇಶ ರವಾನಿಸಿರುವ 14ನೇ ರಜಪೂತಾನ ರೈಫಲ್ಸ್‌ನ ಕಮಾಂಡಿಂಗ್ ಆಫೀಸರ್ ಕರ್ನಲ್ ಹರ್ಷವರ್ಧನ್ ಅವರು, ಧರಾಲಿ ಗ್ರಾಮದಲ್ಲಿ ನಡೆಯುತ್ತಿರುವ ರಕ್ಷಣಾ ಕಾರ್ಯಾಚರಣೆಯ ತೀವ್ರತೆಯ ಕುರಿತು ಸೇನಾ ಕೇಂದ್ರ ಕಚೇರಿಗೆ ಮಾಹಿತಿ ನೀಡಿದ್ದಾರೆ.
“ನಾನು ಕರ್ನಲ್ ಹರ್ಷವರ್ಧನ್. ಧರಾಲಿ ಗ್ರಾಮದಲ್ಲಿ ಭೂಕುಸಿತದ ನಂತರ ರಕ್ಷಣಾ ತಂಡವನ್ನು ಮುನ್ನಡೆಸುತ್ತಿದ್ದೇನೆ. ನಮ್ಮ 150 ಸಿಬ್ಬಂದಿಯ ತಂಡವು ನಿನ್ನೆಯಿಂದ ಗ್ರಾಮಸ್ಥರನ್ನು ರಕ್ಷಿಸಿ ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸುತ್ತಿದೆ. ಕಾಣೆಯಾದವರ ನಿಖರ ಸಂಖ್ಯೆ ಇನ್ನೂ ತಿಳಿದುಬಂದಿಲ್ಲ, ಆದರೂ ಪರಿಹಾರ ಕಾರ್ಯಗಳು ರಾತ್ರಿಯಿಡೀ ನಿರಂತರವಾಗಿ ನಡೆದಿವೆ. ನಮ್ಮ ಸೇನಾ ಶಿಬಿರಕ್ಕೂ ಭಾರೀ ಭೂಕುಸಿತ ಮತ್ತು ಪ್ರವಾಹದಿಂದ ಹಾನಿಯಾಗಿದೆ. ನಾವು ಸಂಪರ್ಕವನ್ನು ಮರುಸ್ಥಾಪಿಸಿ, ರಕ್ಷಣಾ ಪ್ರಯತ್ನಗಳನ್ನು ಮುಂದುವರಿಸುತ್ತಿದ್ದೇವೆ,” ಎಂದು ಕರ್ನಲ್ ತಮ್ಮ ರೇಡಿಯೊ ಸಂದೇಶದಲ್ಲಿ ವಿವರಿಸಿದ್ದಾರೆ.
ಸೇನಾ ಮೂಲಸೌಕರ್ಯಕ್ಕೆ ಹಾನಿಯಾಗಿದ್ದರೂ, ಕರ್ನಲ್ ಹರ್ಷವರ್ಧನ್ ಅವರ ನೇತೃತ್ವದಲ್ಲಿ ರಕ್ಷಣಾ ಕಾರ್ಯಾಚರಣೆಗಳು ಹಗಲಿರುಳೂ ಮುಂದುವರಿದಿವೆ. ಹೆಚ್ಚುವರಿ ಸಹಾಯಕ್ಕಾಗಿ, ಟ್ರ್ಯಾಕರ್ ಡಾಗ್‌ಗಳು, ಡ್ರೋನ್‌ಗಳು ಮತ್ತು ಭೂ ಅಗೆಯುವ ಯಂತ್ರಗಳೊಂದಿಗೆ ಹೆಚ್ಚುವರಿ ಸೇನಾ ತುಕಡಿಗಳನ್ನು ಹರ್ಷಿಲ್‌ಗೆ ನಿಯೋಜಿಸಲಾಗಿದೆ.
ಆಗಸ್ಟ್ 5ರಂದು ಸಂಭವಿಸಿದ ಈ ದುರಂತದ ನಂತರ, ಸೇನೆ, ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆ (NDRF), ರಾಜ್ಯ ವಿಪತ್ತು ನಿರ್ವಹಣಾ ಪಡೆ (SDRF) ಮತ್ತು ಜಿಲ್ಲಾಡಳಿತವು ಒಟ್ಟಾಗಿ ಯುದ್ಧೋಪಾದಿಯಲ್ಲಿ ಬೃಹತ್ ರಕ್ಷಣಾ ಕಾರ್ಯಾಚರಣೆಯನ್ನು ಕೈಗೊಂಡಿವೆ. ಈವರೆಗೆ 130ಕ್ಕೂ ಹೆಚ್ಚು ಜನರನ್ನು ರಕ್ಷಿಸಲಾಗಿದ್ದು, ಅವರಲ್ಲಿ 70ರಿಂದ 80 ಜನರನ್ನು ಗಂಗೋತ್ರಿಯ ಸುರಕ್ಷಿತ ಪ್ರದೇಶಕ್ಕೆ ಸ್ಥಳಾಂತರಿಸಲಾಗಿದೆ. ಸಂತ್ರಸ್ತರಿಗಾಗಿ ಪರಿಹಾರ ಶಿಬಿರಗಳನ್ನು ಸ್ಥಾಪಿಸಿ, ಆಹಾರ, ನೀರು, ಆಶ್ರಯ ಮತ್ತು ವೈದ್ಯಕೀಯ ನೆರವನ್ನು ಒದಗಿಸಲಾಗುತ್ತಿದೆ.
ಬುಧವಾರ ದುರಂತ ಸ್ಥಳಕ್ಕೆ ಭೇಟಿ ನೀಡಿದ ಉತ್ತರಾಖಂಡ ಮುಖ್ಯಮಂತ್ರಿ ಪುಷ್ಕರ್ ಸಿಂಗ್ ಧಾಮಿ, ರಕ್ಷಣಾ ಕಾರ್ಯಾಚರಣೆಗಳನ್ನು ಪರಿಶೀಲಿಸಿದರು. ರಾಜ್ಯದಲ್ಲಿ ಸತತ ಮೂರನೇ ದಿನವೂ ಭಾರೀ ಮಳೆ ಮುಂದುವರಿದಿದ್ದು, ಹವಾಮಾನ ಪರಿಸ್ಥಿತಿ ಗಂಭೀರವಾಗಿದೆ. ಈ ಹಿನ್ನೆಲೆಯಲ್ಲಿ, ಭಾರತೀಯ ಹವಾಮಾನ ಇಲಾಖೆಯು ಹಲವು ಪ್ರದೇಶಗಳಿಗೆ ಆರೆಂಜ್ ಮತ್ತು ಯೆಲ್ಲೊ ಅಲರ್ಟ್ ಘೋಷಿಸಿದೆ. ಮುನ್ನೆಚ್ಚರಿಕೆ ಕ್ರಮವಾಗಿ, ರುದ್ರಪ್ರಯಾಗದಲ್ಲಿ ಕೇದಾರನಾಥ ಯಾತ್ರೆಯನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಿದ್ದು, ಏಳು ಜಿಲ್ಲೆಗಳ ಶಾಲೆಗಳಿಗೆ ರಜೆ ನೀಡಲಾಗಿದೆ.