ದಾವಣಗೆರೆ: ಈರುಳ್ಳಿ ಬೆಲೆ ಇಳಿಮುಖವಾಗಿದ್ದು, ರೈತರು 2 ರೂಪಾಯಿಗೆ ಕೆಜಿ ಮಾರಾಟ ಮಡಬೇಕಾದ ಸ್ಥಿತಿ ಎದುರಾಗಿದೆ. ಈ ಬಾರಿ ಬೆಳೆ ಹೆಚ್ಚಾಗಿದ್ದು, ಬೇಡಿಕೆ ಕಡಿಮೆ ಇರುವ ಕಾರಣ ಈ ಸ್ಥಿತಿ ನಿರ್ಮಾಣವಾಗಿದೆ. ಸಾಗಾಟದ ವೆಚ್ಚವೂ ಬರುತ್ತಿಲ್ಲ ಎಂದು ರೈತರು ಅಳಲುತೊಡಿಕೊಳ್ಳುತ್ತಿದ್ದಾರೆ.
ಈರುಳ್ಳಿ ಬೇಡಿಕೆಯ ತೀವ್ರ ಕುಸಿತವು ಕರ್ನಾಟಕದಲ್ಲಿ ಈರುಳ್ಳಿ ಬೆಲೆ ಕ್ವಿಂಟಲ್‌ಗೆ 5,000ದಿಂದ 6,000 ರೂಪಾಯಿಗಳಾಗಿದೆ. ಇತ್ತೀಚಿನ ಸರಾಸರಿ ಮಾರುಕಟ್ಟೆ ಬೆಲೆ ಕ್ವಿಂಟಲ್‌ಗೆ 1,700 ರೂಪಾಯಿಗಳಿಗೆ ಇಳಿದಿದೆ. ಒಂದು ಕ್ವಿಂಟಾಲ್ ಸ್ಥಳೀಯ ಈರುಳ್ಳಿಗೆ ಕೇವಲ 100 ರಿಂದ 200 ರೂ.ಗಳು ಮಾತ್ರ ಇದ್ದು, ಈರುಳ್ಳಿ ಮಾರಾಟ ಮಾಡಲು ರೈತರು ಹಿಂದೇಟು ಹಾಕುತ್ತಿದ್ದಾರೆ. ಇನ್ನು ಕೆಲ ರೈತರು ಈರುಳ್ಳಿ ಮಾರಾಟ ಮಾಡಲು ಮಾರುಕಟ್ಟೆಗೆ ಭೇಟಿ ನೀಡಿ ಕಾದು ಕೂತಿರುವ ದೃಶ್ಯ ಸಾಮಾನ್ಯವಾಗಿ ಕಂಡುಬರುತ್ತಿವೆ.
ಮಹಾರಾಷ್ಟ್ರ, ನಾಸೀಕ್, ಪುಣೆಯಿಂದ ದಾವಣಗೆರೆ ಮಾರುಕಟ್ಟೆಗೆ ಆಮದಾಗುವ ಒಳ್ಳೇ ಈರುಳ್ಳಿ ಒಂದು ಕೆಜಿಗೆ 10 ರಿಂದ 13 ರೂಪಾಯಿ ಬೆಲೆ ಇದೆ. ಇದರಿಂದ ದಾವಣಗೆರೆ ಜಿಲ್ಲೆಯ ಸ್ಥಳೀಯ ರೈತರು ಬೆಳೆದ ಈರುಳ್ಳಿಗೆ ಒಂದು ಕೆಜಿಗೆ 2 ರೂಪಾಯಿ ಇದೆ ಎಂದು ರೈತರು ಕಣ್ಣೀರು ಹಾಕುತ್ತಿದ್ದಾರೆ.
















