ಬಾಗಲಕೋಟೆ: ಮಾರುಕಟ್ಟೆಯಲ್ಲಿ ಬೆಲೆ ಕುಸಿತಗೊಂಡ ಕಾರಣದಿಂದ ರೈತರೊಬ್ಬರು ಕೈಗೆ ಬಂದಿದ್ದ ಈರುಳ್ಳಿ ಫಸಲನ್ನು ಮಣ್ಣಲ್ಲೇ ಮುಚ್ಚಿ ಹಾಕಿದ್ದಾರೆ.
ಬೀಳಗಿ ತಾಲೂಕಿನ ಮನ್ನಿಕೇರಿ ಗ್ರಾಮದ ಗುರಲಿಂಗಪ್ಪ ಗಡ್ಡಿ ನಾಲ್ಕು ಎಕರೆಯಲ್ಲಿ ಈರುಳ್ಳಿ ಬೆಳೆದಿದ್ದರು. ಈರುಳ್ಳಿ ಉತ್ತಮ ಫಸಲು ಬಂದಿದ್ದರೂ ಮಾರುಕಟ್ಟೆಯಲ್ಲಿ ಬೆಲೆ ಇಲ್ಲ ಎಂದು ಅಳಲು ತೋಡಿಕೊಂಡಿದ್ದಾರೆ.
ಸಾಲ ಮಾಡಿ ಈರುಳ್ಳಿ ಬೆಳೆದಿದ್ದೇನೆ. ಉತ್ತಮ ಫಸಲು ಬಂದರೂ ಮಾರುಕಟ್ಟೆಯಲ್ಲಿ ಬೆಲೆ ಇಲ್ಲ. ಒಂದು ಕ್ವಿಂಟಾಲ್ ಈರುಳ್ಳಿಗೆ 200 ರೂ. ಅಥವಾ 300 ರೂ. ಹೇಳುತ್ತಾರೆ. ಬೆಲೆ ಇಲ್ಲದ್ದಕ್ಕೆ ಈರುಳ್ಳಿಯನ್ನು ಮಣ್ಣಲ್ಲೇ ಮುಚ್ಚುತ್ತಿದ್ದೇನೆ. ಮೊದಲೇ ಅತೀವೃಷ್ಟಿಯಿಂದ ಬೆಳೆ ಹಾಳಾಗಿತ್ತು. ಈಗ ಅಳಿದುಳಿದ ಫಸಲು ಬಂದಿದೆ. ಆದರೆ ಉತ್ತಮ ದರ ಸಿಗುತ್ತಿಲ್ಲ. ಹೀಗಾದರೆ ರೈತ ಹೇಗೆ ಬದುಕಬೇಕು? ಈರುಳ್ಳಿ ಬೆಳೆದ ರೈತರಿಗೆ ಸರ್ಕಾರ ಪರಿಹಾರ ಘೋಷಣೆ ಮಾಡಲಿ ಎಂದು ಆಗ್ರಹಿಸಿದರು.