ಬೆಂಗಳೂರು: ಏಕೀಕೃತ ಪಾವತಿ ವ್ಯವಸ್ಥೆ ಅಂದರೆ, ಯುಪಿಐ ಮೂಲಕ ವಹಿವಾಟು ನಡೆಸುವ ವಿಧಾನವು ದೇಶದಲ್ಲಿ ಡಿಜಿಟಲ್ ಕ್ರಾಂತಿ ಸೃಷ್ಟಿಸಿದೆ. ಸಣ್ಣ ಅಂಗಡಿಯಿಂದ ದೊಡ್ಡ ಮಳಿಗೆಗಳವರೆಗೆ, ಹಳ್ಳಿಯಿಂದ ದಿಲ್ಲಿವರೆಗೆ ಯುಪಿಐ ಪಾವತಿಯು ಜೀವನದ ಭಾಗವಾಗಿದೆ. ಇದನ್ನು ಮನಗಂಡ ರಾಷ್ಟ್ರೀಯ ಪಾವತಿ ನಿಗಮವು (ಎನ್ ಪಿ ಸಿಐ) ಹೊಸ ನಿಯಮ ಜಾರಿಗೆ ತಂದಿದೆ. ಅಂದರೆ, ಸೆಪ್ಟೆಂಬರ್ 15ರ ನಂತರ ಒಂದು ದಿನದಲ್ಲಿ ಯುಪಿಐ ಮೂಲಕ 10 ಲಕ್ಷ ರೂ.ವರೆಗೆ ಕಳುಹಿಸಬಹುದಾಗಿದೆ.
ಹೊಸ ನಿಯಮವು ಪ್ರತಿಯೊಬ್ಬರಿಗೂ ಅನ್ವಯವಾಗುವುದಿಲ್ಲ. ವ್ಯಾಪಾರಸ್ಥರು ಹಾಗೂ ವಿಶೇಷವಾಗಿ ದೃಢೀಕರಣ ಪಡೆದವರು ಮಾತ್ರ ನಿತ್ಯ 10 ಲಕ್ಷ ರೂಪಾಯಿವರೆಗೆ ಕಳುಹಿಸಬಹುದಾಗಿದೆ. ಹಾಗಾಗಿ, ಒಬ್ಬ ಸಾಮಾನ್ಯ ವ್ಯಕ್ತಿಯಿಂದ ಮತ್ತೊಬ್ಬ ಸಾಮಾನ್ಯ ವ್ಯಕ್ತಿಯ ನಡುವೆ ನಡೆಯುವ ವಹಿವಾಟಿನ ಮಿತಿಗಳಲ್ಲಿ ಯಾವುದೇ ಬದಲಾವಣೆ ಇರುವುದಿಲ್ಲ. ಸಾಮಾನ್ಯ ಜನರು ದಿನಕ್ಕೆ ಈಗಲೂ ಒಂದು ಲಕ್ಷ ರೂ.ವರೆಗೆ ಹಣ ಕಳುಹಿಸಬಹುದಾಗಿದೆ.
ವಹಿವಾಟಿನ ವಿಧಾನಗಳ ಅನ್ವಯ ಮಿತಿಯನ್ನು ಏರಿಕೆ ಮಾಡಲಾಗಿದೆ. ಬಂಡವಾಳ ಮಾರುಕಟ್ಟೆ ಹೂಡಿಕೆಗಳು ಮತ್ತು ವಿಮಾ ಪ್ರೀಮಿಯಂ ಪಾವತಿಗಳಿಗೆ ಯುಪಿಐ ಮಿತಿಯನ್ನು 2 ಲಕ್ಷ ರೂ.ನಿಂದ 5 ಲಕ್ಷ ರೂ.ಗೆ ಹೆಚ್ಚಿಸಲಾಗಿದೆ. 24 ಗಂಟೆಗಳಲ್ಲಿ ಗರಿಷ್ಠ 10 ಲಕ್ಷ ರೂ.ವರೆಗೆ ಅನುಮತಿ ನೀಡಲಾಗುತ್ತದೆ. ಇನ್ನು, ಪ್ರಯಾಣದ ವಲಯದಲ್ಲಿ ವಹಿವಾಟಿನ ಮಿತಿಯನ್ನು 1 ಲಕ್ಷ ರೂ.ನಿಂದ 5 ಲಕ್ಷ ರೂ.ಗೆ ಹೆಚ್ಚಿಸಲಾಗಿದೆ. ಕ್ರೆಡಿಟ್ ಕಾರ್ಡ್ ಬಿಲ್ ಪಾವತಿಸುವವರು ಕೂಡ 10 ಲಕ್ಷ ರೂ. ವಹಿವಾಟಿನ ಮಿತಿಯನ್ನು ಬಳಸಿಕೊಳ್ಳಬಹುದು.
ಯುಪಿಐ ಮೂಲಕ ಸಾಲದ ಇಎಂಐ ಪಾವತಿಸುವುದು, ಚಿನ್ನಾಭರಣ ಖರೀದಿ, ವಿದೇಶಕ್ಕೆ ಟಿಕೆಟ್ ಬುಕ್ ಮಾಡುವುದು ಸೇರಿ ಹಲವು ವಹಿವಾಟುಗಳಲ್ಲಿ 10 ಲಕ್ಷ ರೂಪಾಯಿವರೆಗೆ ಕಳುಹಿಸಲು ಅವಕಾಶ ನೀಡಲಾಗಿದೆ. ಸೆಪ್ಟೆಂಬರ್ 15ರಿಂದ ಹೊಸ ನಿಯಮಗಳು ಜಾರಿಗೆ ಬರಲಿವೆ.