ಬೆಂಗಳೂರು: ಸಿಬ್ಬಂದಿ ನೇಮಕಾತಿ ಆಯೋಗ (SSC Stenographer Recruitment 2025)ವು ಸ್ಟೆನೋಗ್ರಾಫರ್ ಗ್ರೇಡ್ ಸಿ ಮತ್ತು ಡಿ ಹುದ್ದೆಗಳ ನೇಮಕಾತಿಗಾಗಿ ಅಧಿಸೂಚನೆ ಹೊರಡಿಸಿದೆ. ಒಟ್ಟು 261 ಹುದ್ದೆಗಳು ಖಾಲಿ ಇದ್ದು, ಜೂನ್ 26ರವರೆಗೆ ಅರ್ಜಿ ಸಲ್ಲಿಸಲು ಅವಕಾಶ ನೀಡಲಾಗಿದೆ. ಆಸಕ್ತ ಅಭ್ಯರ್ಥಿಗಳು ಆನ್ ಲೈನ್ ಮೂಲಕ ಅರ್ಜಿ ಸಲ್ಲಿಸಿ ಉದ್ಯೋಗ ಗಿಟ್ಟಿಸಿಕೊಳ್ಳಬಹುದಾಗಿದೆ. https://ssc.gov.in/ ಗೆ ಭೇಟಿ ನೀಡುವ ಮೂಲಕ ಅರ್ಜಿ ಸಲ್ಲಿಸಬಹುದಾಗಿದೆ.
ಸಿಬ್ಬಂದಿ ನೇಮಕಾತಿ ಆಯೋಗದ ಅಧಿಸೂಚನೆ ಪ್ರಕಾರ, ಸ್ಟೆನೋಗ್ರಾಫರ್ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಯಾವುದೇ ಮಾನ್ಯತೆ ಪಡೆದ ಮಂಡಳಿಯಿಂದ ಪಿಯುಸಿ ಕೋರ್ಸ್ ನಲ್ಲಿ ಉತ್ತೀರ್ಣರಾಗಿರಬೇಕು. ಸ್ಟೆನೋಗ್ರಾಫರ್ ಗ್ರೇಡ್ ಸಿ ಗೆ, ಅಭ್ಯರ್ಥಿಯ ವಯಸ್ಸು 18 ರಿಂದ 30 ವರ್ಷಗಳು. ಸ್ಟೆನೋಗ್ರಾಫರ್ ಗ್ರೇಡ್ ಡಿ ಗೆ, ಅರ್ಜಿದಾರರ ವಯಸ್ಸು 18 ರಿಂದ 27 ವರ್ಷಗಳು. ಒಬಿಸಿ ವರ್ಗಕ್ಕೆ ಗರಿಷ್ಠ ವಯೋಮಿತಿಯಲ್ಲಿ 3 ವರ್ಷಗಳು ಮತ್ತು ಎಸ್ಸಿ ಎಸ್ಟಿಗೆ 5 ವರ್ಷಗಳು ಸಡಿಲಿಕೆ ನೀಡಲಾಗಿದೆ.
ಜನರಲ್, ಒಬಿಸಿ ಮತ್ತು ಇಡಬ್ಲ್ಯೂಎಸ್ ವರ್ಗಗಳಿಗೆ ಅರ್ಜಿ ಶುಲ್ಕವನ್ನು 100 ರೂಪಾಯಿ ಎಂದು ನಿಗದಿಪಡಿಸಲಾಗಿದೆ. ಮಹಿಳೆಯರು, ಎಸ್ ಸಿ, ಎಸ್ ಟಿ ಮತ್ತು ದಿವ್ಯಾಂಗ ಅರ್ಜಿದಾರರಿಗೆ ಅರ್ಜಿ ಶುಲ್ಕವನ್ನು ಪಾವತಿಸುವುದರಿಂದ ವಿನಾಯಿತಿ ನೀಡಲಾಗಿದೆ. ಶುಲ್ಕವನ್ನು ಆನ್ ಲೈನ್ ನಲ್ಲಿ ಪಾವತಿಸಬೇಕು.
ಲಿಖಿತ ಪರೀಕ್ಷೆ, ದಾಖಲೆ ಪರಿಶೀಲನೆ ಸೇರಿ ಹಲವು ಪ್ರಕ್ರಿಯೆಗಳ ಮೂಲಕ ನೇಮಕಾತಿ ಮಾಡಲಾಗುತ್ತದೆ. ಪರೀಕ್ಷೆಯನ್ನು ಆಗಸ್ಟ್ 6 ರಿಂದ ಆಗಸ್ಟ್ 11 ರವರೆಗೆ ಸಿಬಿಟಿ (ಕಂಪ್ಯೂಟರ್ ಬೇಸ್ಡ್ ಟೆಸ್ಟ್) ಮೋಡ್ ನಲ್ಲಿ ನಡೆಸಲಾಗುವುದು. ಪರೀಕ್ಷೆಗೆ ಹಾಜರಾಗುವ ಅಭ್ಯರ್ಥಿಗಳಿಗೆ ನಿಗದಿತ ಸಮಯದಲ್ಲಿ ಪ್ರವೇಶ ಪತ್ರವನ್ನು ನೀಡಲಾಗುತ್ತದೆ. ಹೆಚ್ಚಿನ ಮಾಹಿತಿಗಾಗಿ, ನೀವು ಆಯೋಗದ ಅಧಿಕೃತ ವೆಬ್ ಸೈಟ್ ಗೆ ಭೇಟಿ ನೀಡಬಹುದು.



















