ಬೆಂಗಳೂರು: ಕನ್ನಡಕ್ಕೆ ಅಪಮಾನ ಮಾಡಿರುವ ನಟ ಕಮಲ್ ಹಾಸನ್ ನಟಿಸಿರುವ ಥಗ್ ಲೈಫ್ ಸಿನಿಮಾವನ್ನು ರಾಜ್ಯದಲ್ಲಿ ಬಿಡುಗಡೆ ಮಾಡಬಾರದೆಂದು ಕನ್ನಡಿಗರು, ಕನ್ನಡಪರ ಸಂಘಟನೆ ಕಾರ್ಯಕರ್ತರು ಪ್ರತಿಭಟನೆ ನಡೆಸಿದ್ದರು. ಈ ಮಧ್ಯೆ ಕಮಲ್ ಹಾಸನ್ ಕೋರ್ಟ್ ಮೆಟ್ಟಿಲು ಏರಿದ್ದರು. ಸುಪ್ರೀಂ ಕೋರ್ಟ್ ಚಿತ್ರ ಬಿಡುಗಡೆಗೆ ಅನುಮತಿ ನೀಡಿದೆ. ಈ ಹಿನ್ನೆಲೆಯಲ್ಲಿ ಹೋರಾಟಗಾರರಿಗೆ ಪೊಲೀಸರು ನೋಟಿಸ್ ನೀಡುತ್ತಿದ್ದಾರೆ.

ಚಿತ್ರ ಬಿಡುಗಡೆಗೆ ಗ್ರೀನ್ ಸಿಗ್ನಲ್ ಸಿಗುತ್ತಿದ್ದಂತೆ ಸ್ವಾಭಿಮಾನಿ ಕನ್ನಡಿಗರು ಸಿನಿಮಾ ಬಹಿಷ್ಕರಿಸುವಂತೆ ಕನ್ನಡಪರ ಹೋರಾಟಗಾರರು ಕರೆ ನೀಡಿದ್ದಾರೆ. ಈ ಹಿನ್ನೆಲೆಯಲ್ಲಿ ಕನ್ನಡ ಪರ ಹೋರಾಟಗಾರರಿಗೆ ಪೊಲೀಸರು ನೋಟಿಸ್ ನೀಡಿದ್ದಾರೆ. ಥಗ್ ಲೈಫ್ ಸಿನಿಮಾ ವಿರುದ್ಧ ಫ್ರೀಡಂ ಪಾರ್ಕ್ ಹೊರತು ಪಡಿಸಿ ಬೇರೆಲ್ಲೂ ಪ್ರತಿಭಟನೆ ನಡೆಸಬಾರದು ಎಂದು ಕರವೇ ರಾಜ್ಯಾಧ್ಯಕ್ಷ ಪ್ರವೀಣ್ ಶೆಟ್ಟಿಗೆ ನೋಟಿಸ್ ನೀಡಿದ್ದಾರೆ. ಈ ನೋಟಿಸ್ ನ್ನು ಅವರ ಮನೆಯ ಮುಂದೆ ಅಂಟಿಸಿದ್ದಾರೆ.

ಸಿನಿಮಾ ಬಿಡುಗಡೆಯ ವೇಳೆ ಥಿಯೇಟರ್ ಗೆ ಮುತ್ತಿಗೆ ಹಾಕುವ ಸಾಧ್ಯತೆ ಇರುವ ಹಿನ್ನೆಲೆಯಲ್ಲಿ ಪೊಲೀಸರು ನೋಟಿಸ್ ಜಾರಿ ಮಾಡಿದ್ದಾರೆ. ಅಲ್ಲದೇ, ಆರ್.ಟಿ. ನಗರದ ಪ್ರವೀಣ್ ಶೆಟ್ಟಿ ನಿವಾಸದ ಮುಂದೆ ಬೆಳ್ಳಂಬೆಳಗ್ಗೆಯೇ ಖಾಕಿ ಕಣ್ಗಾವಲಿದೆ.