ಟಿ20 ವಿಶ್ವಕಪ್ ಸೆಮಿಫೈನಲ್ ಪಂದ್ಯಗಳಿಗೂ ಮುನ್ನ ಐಸಿಸಿ ತನ್ನ ನೂತನ ಟಿ20 ಬ್ಯಾಟ್ಸ್ಮನ್ಗಳ ಶ್ರೇಯಾಂಕ ಬಿಡುಗಡೆ ಮಾಡಿದ್ದು, ಬಹುಕಾಲ ನಂಬರ್ ಒನ್ ಸ್ಥಾನದಲ್ಲಿದ್ದ ಭಾರತದ ಸೂರ್ಯಕುಮಾರ್ ಯಾದವ್ ಕೆಳಗೆ ಇಳಿದಿದ್ದಾರೆ.
ಸೂರ್ಯಕುಮಾರ್ ಸ್ಥಾನಕ್ಕೆ ಆಸ್ಟ್ರೇಲಿಯಾದ ಟ್ರಾವಿಸ್ ಹೆಡ್ ಏರಿದ್ದಾರೆ. ಸೂರ್ಯಕುಮಾರ್ ಅಲ್ಲದೆ, ಈ ಬಾರಿಯ ಶ್ರೇಯಾಂಕದಲ್ಲಿ ಇಂಗ್ಲೆಂಡ್ನ ಫಿಲ್ ಸಾಲ್ಟ್, ಪಾಕಿಸ್ತಾನದ ಬಾಬರ್ ಆಝಂ, ಮೊಹಮ್ಮದ್ ರಿಜ್ವಾನ್ ಕೂಡ ಕುಸಿತ ಕಂಡಿದ್ದಾರೆ. ಶ್ರೇಯಾಂಕದಲ್ಲಿ ಬರೋಬ್ಬರಿ 4 ಸ್ಥಾನ ಮೇಲೇರಿರುವ ಆಸ್ಟ್ರೇಲಿಯಾದ ಟ್ರಾವಿಸ್ ಹೆಡ್ 844 ರೇಟಿಂಗ್ ಪಾಯಿಂಟ್ಗಳೊಂದಿಗೆ ಸೂರ್ಯಕುಮಾರ್ ಯಾದವ್ರನ್ನು ಹಿಂದಿಕ್ಕಿ ನಂಬರ್ 1 ಸ್ಥಾನ ಅಲಂಕರಿಸಿದ್ದಾರೆ.
ಎರಡನೇ ಸ್ಥಾನಕ್ಕೆ ಕುಸಿದಿರುವ ಸೂರ್ಯಕುಮಾರ್ ಯಾದವ್ ಸದ್ಯ 842 ರೇಟಿಂಗ್ ಪಾಯಿಂಟ್ ಹೊಂದಿದ್ದಾರೆ. ಇನ್ನುಳಿದ ಪಂದ್ಯಗಳಲ್ಲಿ ಸೂರ್ಯಕುಮಾರ್ ಯಾದವ್ ಉತ್ತಮ ಪ್ರದರ್ಶನ ತೋರಿದರೆ ನಂ. 1 ಸ್ಥಾನಕ್ಕೆ ಏರಬಹುದು. ಇಂಗ್ಲೆಂಡ್ನ ಫಿಲ್ ಸಾಲ್ಟ್ ಕೂಡ ಒಂದು ಸ್ಥಾನ ಕಸಿದಿದ್ದು, 816 ರೇಟಿಂಗ್ನೊಂದಿಗೆ ಮೂರನೇ ಸ್ಥಾನದಲ್ಲಿದ್ದಾರೆ. ಪಾಕಿಸ್ತಾನದ ನಾಯಕ ಬಾಬರ್ ಆಝಂ ಕೂಡ ಒಂದು ಸ್ಥಾನ ಕುಸಿದಿದ್ದು, 755 ರೇಟಿಂಗ್ನೊಂದಿಗೆ ನಾಲ್ಕನೇ ಸ್ಥಾನದಲ್ಲಿದ್ದಾರೆ. ಪಾಕ್ ನ ಮೊಹಮ್ಮದ್ ರಿಜ್ವಾನ್ 746 ರೇಟಿಂಗ್ ನೊಂದಿಗೆ ಒಂದು ಸ್ಥಾನ ಕುಸಿತ ಕಂಡು 5ನೇ ಸ್ಥಾನದಲ್ಲಿದ್ದಾರೆ. ಇಂಗ್ಲೆಂಡ್ ನಾಯಕ ಜೋಸ್ ಬಟ್ಲರ್ 6, ಭಾರತದ ಯಶಸ್ವಿ ಜೈಸ್ವಾಲ್ 7, ದಕ್ಷಿಣ ಆಫ್ರಿಕಾದ ಐಡೆನ್ ಮಾರ್ಕ್ರಾಮ್ 8, ವೆಸ್ಟ್ ಇಂಡೀಸ್ನ ಬ್ರೆಂಡನ್ ಕಿಂಗ್ 9 ಹಾಗೂ ವೆಸ್ಟ್ ಇಂಡೀಸ್ನ ಜಾನ್ಸನ್ ಚಾರ್ಲ್ಸ್ 10 ನೇ ಸ್ಥಾನ ಪಡೆದಿದ್ದಾರೆ.