ಬೆಂಗಳೂರು: ದೇಶದಲ್ಲಿ ತರಕಾರಿ ಮಾರುವವರಿಂದ ಹಿಡಿದು ದೊಡ್ಡ ದೊಡ್ಡ ಮಾಲ್ ಗಳಲ್ಲಿ ಕೂಡ ಯುಪಿಐ ಪೆಮೆಂಟ್ ಪದ್ಧತಿ ಜಾಸ್ತಿಯಾಗುತ್ತಲೇ ಇದೆ. ಇದು ಸುಲಭ ಹಾಗೂ ಪಾರದರ್ಶಕವೂ ಆಗಿದೆ. ಆದರೆ, ಇನ್ನುಮುಂದೆ ಪೇಟಿಎಂ, ಫೋನ್ ಪೇ ಹಾಗೂ ಕ್ರೆಡ್ ಆ್ಯಪ್ ಗಳ ಮೂಲಕ ಮನೆಯ ಬಾಡಿಗೆಯನ್ನು ಪಾವತಿಸಲು ಆಗುವುದಿಲ್ಲ. ಏಕೆಂದರೆ, ಅಗ್ರಿಗೇಟರ್ ಗಳಿಗೆ ಮನೆ ಬಾಡಿಗೆಗೆ ಪೇಮೆಂಟ್ ಮಾಡುವ ಸೌಲಭ್ಯವನ್ನು ರದ್ದುಗೊಳಿಸುವಂತೆ ಭಾರತೀಯ ರಿಸರ್ವ್ ಬ್ಯಾಂಕ್ ಆದೇಶಿಸಿದೆ.
ಫೋನ್ ಪೇ, ಪೇಟಿಎಂ ಹಾಗೂ ಕ್ರೆಡ್ ಮೂಲಕ ಪ್ರತಿ ತಿಂಗಳು ಕ್ರೆಡಿಟ್ ಕಾರ್ಡ್ ಬಳಸಿ ಮನೆ ಬಾಡಿಗೆ ಪಾವತಿಸುವುದು ಹೆಚ್ಚು ಖ್ಯಾತಿಯಾಗಿತ್ತು. ದಿನೇದಿನೆ ಇಂತಹ ಪೇಮೆಂಟ್ ಗಳ ಸಂಖ್ಯೆಯೂ ಜಾಸ್ತಿಯಾಗುತ್ತಿತ್ತು. ಹೀಗೆ ಪೇಮೆಂಟ್ ಮಾಡುವುದರಿಂದ ಬಾಡಿಗೆ ಇದ್ದವರಿಗೆ ಕ್ಯಾಶ್ ಬ್ಯಾಕ್, ರಿವಾರ್ಡ್ ಪಾಯಿಂಟ್ ಗಳು ಕೂಡ ಸಿಗುತ್ತಿದ್ದವು. ಆದರೆ, ಆರ್ ಬಿ ಐ ಆದೇಶದಿಂದಾಗಿ ಇನ್ನು ಮುಂದೆ ಈ ಅಗ್ರಿಗೇಟರ್ ಗಳ ಮೂಲಕ ಬಾಡಿಗೆ ಪಾವತಿಸಲು ಆಗುವುದಿಲ್ಲ.
ಕ್ರೆಡಿಟ್ ಕಾರ್ಡ್ ಬಳಸಿ ಪೇಮೆಂಟ್ ಮಾಡುವುದರಿಂದ ಮನೆಯ ಮಾಲೀಕರಿಗೆ ತೊಂದರೆಯಾಗುತ್ತಿದೆ. ಅವರು ಕ್ರೆಡಿಟ್ ಕಾರ್ಡ್ ಮೂಲಕ ಪಾವತಿಯಾದ ಹಣವನ್ನು ಡ್ರಾ ಮಾಡಲು ತೊಂದರೆಯಾಗುತ್ತಿದೆ ಎಂಬ ಆರೋಪಗಳು ಕೇಳಿಬಂದಿದ್ದವು. ಇದೇ ಕಾರಣಕ್ಕಾಗಿ ಆರ್ ಬಿ ಐ ಈಗ ಹೊಸ ಆದೇಶವನ್ನು ಹೊರಡಿಸಿದೆ. ಇದರಿಂದಾಗಿ ಬಾಡಿಗೆಗೆ ಇರುವವರಿಗೆ ಸ್ವಲ್ಪ ತೊಂದರೆಯಾಗಲಿದೆ.
ಪೇಟಿಎಂ, ಫೋನ್ ಪೇ ಹಾಗೂ ಕ್ರೆಡ್ ಮೂಲಕ ಕ್ರೆಡಿಟ್ ಕಾರ್ಡ್ ಬಳಸಿ ಮನೆ ಬಾಡಿಗೆ ಪಾವತಿಸುವುದರಿಂದ ಬಾಡಿಗೆದಾರರಿಗೆ 45 ದಿನಗಳ ಬಡ್ಡಿರಹಿತ ಕ್ರೆಡಿಟ್ ಸಿಗುತ್ತಿತ್ತು. ಮನೆ ಬಾಡಿಗೆ ಪಾವತಿಸಿದ 45 ದಿನಗಳ ಬಳಿಕ ಅವರು ಕ್ರೆಡಿಟ್ ಕಾರ್ಡ್ ಬಿಲ್ ಪಾವತಿಸಬಹುದಿತ್ತು. ತುರ್ತು ಸಂದರ್ಭಗಳಲ್ಲಿ ಇದು ನೆರವಿಗೆ ಬರುತ್ತಿತ್ತು. ಆದರೆ, ಇನ್ನುಮುಂದೆ ಈ ಸೌಕರ್ಯ ಇರುವುದಿಲ್ಲ.