ಬೆಂಗಳೂರು: ರಾಜಕಾಲುವೆ ಒತ್ತುವರಿ ತೆರವುಗೊಳಿಸಲು ಸಿಎಂ ಸಿದ್ದರಾಮಯ್ಯ (Siddaramaiah) ಸೂಚನೆ ನೀಡಿದ್ದಾರೆ.
ಬೆಂಗಳೂರಿನಲ್ಲಿ ಮಳೆಹಾನಿ ಪ್ರದೇಶಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ ನಂತರ ಮಾತನಾಡಿದ ಅವರು, ಮಾನ್ಯತಾ ಟೆಕ್ ಪಾರ್ಕ್ ಬಳಿ ರಾಜಕಾಲುವೆ ಪರಿಶೀಲನೆ ನಡೆಸಿದ್ದೇವೆ. ಆ ಪ್ರದೇಶದಲ್ಲಿ ರಾಜಕಾಲುವೆ ಒತ್ತುವರಿ ಆಗಿದೆ. ಕೂಡಲೇ ತೆರವಿಗೆ ಸೂಚನೆ ನೀಡಿದ್ದೇನೆ. ಮಾನ್ಯತಾ ಟೆಕ್ ಪಾರ್ಕ್ನ ಸಿಇಒ ತಮ್ಮ ಸ್ವಂತ ರಸ್ತೆಯಲ್ಲಿ ಚರಂಡಿ ನಿರ್ಮಿಸಿ, 90 ದಿನದಲ್ಲಿ ಪರಿಹಾರ ಮಾಡಿ ಕೊಡುತ್ತೇನೆ ಎಂದಿದ್ದಾರೆ. ಹೆಚ್ಬಿಆರ್ ಬಡಾವಣೆ 5ನೇ ಹಂತದಲ್ಲಿ ರಾಜಕಾಲುವೆ ಸಮಸ್ಯೆ ಇದೆ. ಅಲ್ಲಿ ರಾಜಕಾಲುವೆ ತಡೆಗೋಡೆ ನಿರ್ಮಾಣ ಆಗುತ್ತಿದೆ ಎಂದಿದ್ದಾರೆ
.
ಅಲ್ಲದೇ, ಈ ಕುರಿತು ಟ್ವೀಟ್ ಮಾಡಿರುವ ಅವರು, ಬೆಂಗಳೂರಿನ ಮಳೆ ಬಾಧಿತ ಪ್ರದೇಶಗಳ ಭೇಟಿಯ ಭಾಗವಾಗಿ ವಡ್ಡರಪಾಳ್ಯ ಲೇಔಟ್, ಗೆದ್ದಲಹಳ್ಳಿಗಳಿಗೆ ಭೇಟಿನೀಡಿ, ಜನರ ಸಮಸ್ಯೆ ಆಲಿಸಿ, ಸ್ಥಳದಲ್ಲೇ ಪರಿಹಾರ ಮಾರ್ಗೋಪಾಯಗಳನ್ನು ಚರ್ಚಿಸಿದೆ. ರಾಜಕಾಲುವೆ ವಿಸ್ತೀರ್ಣ 29 ಮೀಟರ್ ಇದೆ, ಆದರೆ ಗೆದ್ದಲಹಳ್ಳಿಯ ಕಾಲುವೆ ಇಕ್ಕಟ್ಟಾಗಿದ್ದು, ಕೇವಲ 8 ಮೀಟರ್ ಇದೆ. ಆದ್ದರಿಂದ ಮೇಲಿನಿಂದ ರಾಜಕಾಲುವೆಯಲ್ಲಿ ಹರಿದು ಬರುವ ಬೃಹತ್ ಪ್ರಮಾಣದ ನೀರು ಈ ಬಾಟಲ್ ನೆಕ್ ನಲ್ಲಿ ತುಂಬಿ ಹೊರಹರಿದು ಸಾಯಿ ಲೇಔಟ್ ಗೆ ನುಗ್ಗುತ್ತಿದೆ. ಇದು ಇಲ್ಲಿನ ಪ್ರವಾಹ ಪರಿಸ್ಥಿತಿಗೆ ಕಾರಣ.
ಆದ್ದರಿಂದ 8 ಮೀಟರ್ ಬಾಟಲ್ ನೆಕ್ ಇರುವ ರೈಲ್ವೇ ವೆಂಟ್ ಅನ್ನು ವಿಸ್ತರಿಸಲು ಸೂಚಿಸಿದ್ದೇನೆ. ನಿನ್ನೆ ದಿನ ರೈಲ್ವೇಯವರು ಈ ವೆಂಟ್ ವಿಸ್ತರಣೆಗೆ ಬಿ.ಡಿ.ಎ ಗೆ ಅನುಮತಿ ನೀಡಿದ್ದು, ಆದಷ್ಟು ಬೇಗ ಕಾಮಗಾರಿ ಆರಂಭಿಸುವ ಬಗ್ಗೆ ಕ್ರಮ ವಹಿಸುವ ಜೊತೆಗೆ ಕಾಲುವೆ ನಿರ್ವಹಣೆ ಮಾಡದ ಗುತ್ತಿಗೆದಾರರಿಂದ ವಿವರಣೆ ಪಡೆಯುವಂತೆಯೂ ಅಧಿಕಾರಿಗಳಿಗೆ ಸೂಚನೆ ನೀಡಿದ್ದೇನೆ ಎಂದು ಹೇಳಿದ್ದಾರೆ.