ಬೆಂಗಳೂರು : ಧರ್ಮಸ್ಥಳದ ಭಾಗದಲ್ಲಿ ನಡೆದಿದೆ ಎನ್ನಲಾದ ಅಸಹಜ ಸಾವುಗಳ ಬಗ್ಗೆ ಹಿನ್ನೆಲೆಯಲ್ಲಿ ತನಿಖೆ ನಡೆಯುತ್ತಿದೆ. ಈ ನಡುವೆ ನಡೆಯುತ್ತಿರುವ ಅಪಪ್ರಚಾರ ಸರಿಯಲ್ಲ. ಅಭಿವ್ಯಕ್ತಿ ಸ್ವಾತಂತ್ರ್ಯ ಹೆಸರಲ್ಲಿ ಸ್ವಾತಂತ್ರ್ಯ ಹರಣ ಅನೇಕರು ಮಾಡುತ್ತಿದ್ದಾರೆ ಎಂದು ಕಾರ್ಕಳ ವಿಧಾನಸಭಾ ಕ್ಷೇತ್ರದ ಶಾಸಕ ಸುನೀಲ್ ಕುಮಾರ್ ಕಾರ್ಕಳ ಹೇಳಿದ್ದಾರೆ.
ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಸುನೀಲ್, ಇಲ್ಲಿಯವರೆಗೂ ನಾವು ಮಾತನಾಡುವ ಅನಿವಾರ್ಯತೆ ಇರಲಿಲ್ಲ. ಆದರೆ ಹಿಂದೂ ಧರ್ಮದ ಬಗ್ಗೆ ಅವಹೇಳನ ಸರಿಯಲ್ಲ. ಕಳೇಬರದ ಸತ್ಯಸತ್ಯತೆ ಮತ್ತು ಎಸ್.ಐ.ಟಿ ತನಿಖೆ ಬಗ್ಗೆ ನಮ್ಮ ವಿರೋಧ ಇಲ್ಲ. ತೀರ್ಪು ಹೀಗೆಯೇ ಬಂತೆಂದು ಹೇಳುವುದು ಸರಿಯಲ್ಲ. ಹಿಂದೂ ಶ್ರದ್ಧಾ ಕೇಂದ್ರದ ಮೇಲೆ ಅಪಪ್ರಚಾರ ಸರಿಯಲ್ಲ. ಧರ್ಮಸ್ಥಳ ಮತ್ತು ಹಿಂದೂ ಧರ್ಮದ ಅಪಪ್ರಚಾರವನ್ನೂ ತನಿಖೆ ಮಾಡಬೇಕು. ಕಳೆದ ಹತ್ತು ದಿನದಿಂದ ಕಳೇಬರ ತೆಗೆಯುವ ನಿಟ್ಟಿನಲ್ಲಿ ಅನೇಕ ಚರ್ಚೆ ಶುರುವಾಗಿದೆ. ಅಪಪ್ರಚಾರ ಬಗ್ಗೆ ಪೊಲೀಸರು ಈವರೆಗೂ ಧ್ವನಿ ಎತ್ತಿಲ್ಲ ಎಂದು ಹೇಳಿದ್ದಾರೆ.
ಧಾರ್ಮಿಕ ಅಪಪ್ರಚಾರ ಆಯ್ತೆಂದು ಹಿಂದೂ ಕಾರ್ಯಕರ್ತರ ಮೇಲೆ ಸುಮೋಟೋ ಕೇಸ್ ದಾಖಲಿಸಿಕೊಂಡಿದ್ದರು. ನೂರಾರು ಕಾರ್ಯಕರ್ತರ ಮೇಲೆ ಕೇಸ್ ಹಾಕಿದ್ದರು. ಧರ್ಮಸ್ಥಳ ವಿಚಾರದಲ್ಲಿ ಯಾಕೆ ಸುಮೋಟೋ ಕೇಸ್ ದಾಖಲಿಸಿಕೊಳ್ಳಲಿಲ್ಲ. ಸರ್ಕಾರವೇ ಇದಕ್ಕೆ ದಾರಿ ಮಾಡಿಕೊಡುತ್ತಿದೆಯೇ ? ಧರ್ಮದ ಹೆಸರಲ್ಲಿ ಅಪಪ್ರಚಾರ ಮಾಡುವುದನ್ನು ಸರ್ಕಾರ ನಿಲ್ಲಿಸಬೇಕು. ಸಂಜೆ ಆಗುತ್ತಿದ್ದಂತೆ ಹೆಣ್ಣಿನ ಅಸ್ಥಿಪಂಜರ, ಯುವಕನ ಅಸ್ಥಿಪಂಜರ ಪತ್ತೆಯಾಗಿದೆ ಎಂದು ಹೇಳುವುದು ಸರಿಯಲ್ಲ ಎಂದಿದ್ದಾರೆ.
ಎಸ್.ಐ.ಟಿ ಈ ಎಲ್ಲಾ ಅಪಪ್ರಚಾರಕ್ಕೆ ತೆರೆ ಎಳೆಯಬೇಕು. ಅಧಿವೇಶನ ಆರಂಭವಾಗುವ ಮೊದಲು ಮಧ್ಯಂತರ ವರದಿಯನ್ನು ನೀಡಿ. ಹಿಂದೂ ಧರ್ಮದ ಮೇಲೆ ಇಂತಹ ಅಪಪ್ರಚಾರ ಹಿಂದಿನಿಂದಲೂ ನಡೆಯುತ್ತಿದೆ. ಜನರ ಅಸಹನೆ ಕಟ್ಟೆ ಒಡೆಯುವ ಮುನ್ನ ಎಚ್ಚೆತ್ತುಕೊಳ್ಳಿ. ತನಿಖೆಯನ್ನು ಪೊಲೀಸರು ಮಾಡುವುದು ಬಿಟ್ಟು, ಸಾಮಾಜಿಕ ಜಾಲತಾಣಗಳು ಮಾಡುತ್ತಿವೆ. ಧರ್ಮಸ್ಥಳ ಧರ್ಮಾಧಿಕಾರಿ ಮೇಲೆ ಅಪವಾದ ಸರಿಯಲ್ಲ.ಇನ್ನಾದರೂ ತನಿಖೆ ಸರಿಯಾದ ದಾರಿಯಲ್ಲಿ ಸಾಗಲಿ ಎಂದು ಅವರು ಆಗ್ರಹಿಸಿದ್ದಾರೆ.