ನವದೆಹಲಿ: “ರಾಜಕೀಯ ಯುದ್ಧಗಳನ್ನು ನಡೆಸಲು” ಕಾನೂನು ಪ್ರಕ್ರಿಯೆಗಳನ್ನು ಬಳಸಿಕೊಳ್ಳುತ್ತಿದ್ದೀರಾ? ಇದು ತನಿಖಾ ಸಂಸ್ಥೆಯ ದುರ್ಬಳಕೆಯಲ್ಲವೇ?
ಹೀಗೆಂದು ಜಾರಿ ನಿರ್ದೇಶನಾಲಯ(ED)ವನ್ನು ಸುಪ್ರೀಂ ಕೋರ್ಟ್ ಸೋಮವಾರ ತೀವ್ರ ತರಾಟೆಗೆ ತೆಗೆದುಕೊಂಡಿದೆ. ಎರಡು ಪ್ರತ್ಯೇಕ ಪ್ರಕರಣಗಳ ವಿಚಾರಣೆ ವೇಳೆ, ಮುಖ್ಯ ನ್ಯಾಯಮೂರ್ತಿಗಳ ನೇತೃತ್ವದ ಪೀಠವು ಇ.ಡಿ. ಕಾರ್ಯವೈಖರಿಯನ್ನು ಕಟುವಾಗಿ ಟೀಕಿಸಿದೆ.

ಪ್ರಕರಣ 1: ಮುಡಾ ಪ್ರಕರಣದಲ್ಲಿ ಬೈರತಿ ಸುರೇಶ್‌ಗೆ ರಿಲೀಫ್
ಕರ್ನಾಟಕದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಪತ್ನಿ ಬಿ.ಎಂ. ಪಾರ್ವತಿ ಮತ್ತು ನಗರಾಭಿವೃದ್ಧಿ ಸಚಿವ ಬೈರತಿ ಸುರೇಶ್ ಅವರಿಗೆ ಸಂಬಂಧಿಸಿದ ಮುಡಾ (ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ) ನಿವೇಶನ ಹಂಚಿಕೆ ಪ್ರಕರಣದಲ್ಲಿ, ಇ.ಡಿ. ತನಿಖೆಯನ್ನು ರದ್ದುಗೊಳಿಸಿದ್ದ ಕರ್ನಾಟಕ ಹೈಕೋರ್ಟ್ ಆದೇಶವನ್ನು ಪ್ರಶ್ನಿಸಿ ಇ.ಡಿ. ಸಲ್ಲಿಸಿದ್ದ ಮೇಲ್ಮನವಿಯನ್ನು ಸುಪ್ರೀಂ ಕೋರ್ಟ್ ನ್ಯಾಯುಪೀಠ ಇಂದು ವಜಾಗೊಳಿಸಿದೆ.
ವಿಚಾರಣೆ ವೇಳೆ ಮುಖ್ಯ ನ್ಯಾಯಮೂರ್ತಿ ಬಿ.ಆರ್. ಗವಾಯಿ ಅವರು, “ರಾಜಕೀಯ ಸಮರವನ್ನು ಚುನಾವಣಾ ಕಣ ಮಾಡಬೇಕು. ಅದಕ್ಕೆ ನಿಮ್ಮನ್ನು (ಇಡಿ) ಏಕೆ ಬಳಸಿಕೊಳ್ಳಲಾಗುತ್ತಿದೆ?” ಎಂದು ಖಾರವಾಗಿ ಪ್ರಶ್ನಿಸಿದರು. “ಮಹಾರಾಷ್ಟ್ರದಲ್ಲಿ ಇ.ಡಿ.ಯೊಂದಿಗಿನ ನನ್ನ ಅನುಭವ ನನಗೆ ಸರಿಯಾಗಿ ನೆನಪಿದೆ. ದಯವಿಟ್ಟು ನಮ್ಮ ಬಾಯಿ ತೆರೆಸಬೇಡಿ, ಇಲ್ಲದಿದ್ದರೆ ನಾವು ಜಾರಿ ನಿರ್ದೇಶನಾಲಯದ ಬಗ್ಗೆ ಕಠಿಣವಾಗಿ ಮಾತನಾಡಬೇಕಾಗುತ್ತದೆ” ಎಂದೂ ಎಚ್ಚರಿಕೆ ನೀಡಿದರು. ಅಲ್ಲದೇ, ಕರ್ನಾಟಕ ಹೈಕೋರ್ಟ್ ಆದೇಶದಲ್ಲಿ ಯಾವುದೇ ದೋಷವಿಲ್ಲ ಎಂದು ಸ್ಪಷ್ಟಪಡಿಸಿದ ನ್ಯಾಯಪೀಠ, ಇ.ಡಿ. ಸಲ್ಲಿಸಿದ್ದ ಮೇಲ್ಮನವಿಯನ್ನು ವಜಾಗೊಳಿಸಿತು.
ಪ್ರಕರಣ 2: ವಕೀಲರಿಗೆ ಇ.ಡಿ. ಸಮನ್ಸ್, ಸುಪ್ರೀಂ ಗರಂ
ಮತ್ತೊಂದು ಪ್ರಕರಣದಲ್ಲಿ ಕಕ್ಷಿದಾರರಿಗೆ ನೀಡಿದ ಕಾನೂನು ಸಲಹೆಯ ಆಧಾರದ ಮೇಲೆ ವಕೀಲರಿಗೆ ಇ.ಡಿ. ಸಮನ್ಸ್ ಜಾರಿ ಮಾಡುತ್ತಿರುವ ವಿಷಯವನ್ನು ಸುಪ್ರೀಂ ಕೋರ್ಟ್ ಸ್ವಯಂಪ್ರೇರಿತವಾಗಿ ವಿಚಾರಣೆಗೆ ಕೈಗೆತ್ತಿಕೊಂಡಿದೆ. ಇ.ಡಿ.ಯ ಈ ಕ್ರಮವು ವಕೀಲರ ವೃತ್ತಿಯ ಮೇಲೆ “ಭಯದ ವಾತಾವರಣ” ಸೃಷ್ಟಿಸುತ್ತಿದೆ ಎಂದು ಹಿರಿಯ ವಕೀಲರು ಆತಂಕ ವ್ಯಕ್ತಪಡಿಸಿದರು.
ಇದಕ್ಕೆ ಸಹಮತ ವ್ಯಕ್ತಪಡಿಸಿದ ಮುಖ್ಯ ನ್ಯಾಯಮೂರ್ತಿ ಗವಾಯಿ, “ವಕೀಲರು ನೀಡುವ ಸಲಹೆಯು ‘ವಿಶೇಷ ಸಂವಹನ’ (privileged communication) ಆಗಿರುತ್ತದೆ. ಸಲಹೆ ತಪ್ಪಾಗಿದ್ದರೂ, ಅವರನ್ನು ವಿಚಾರಣೆಗೆ ಹೇಗೆ ಕರೆಯುತ್ತೀರಿ? ಈ ಬಗ್ಗೆ ಸ್ಪಷ್ಟ ಮಾರ್ಗಸೂಚಿಗಳನ್ನು ರೂಪಿಸಬೇಕಿದೆ,” ಎಂದು ಅಭಿಪ್ರಾಯಪಟ್ಟರು.
“ನ್ಯಾಯಾಲಯವನ್ನು ರಾಜಕೀಯ ವೇದಿಕೆಯಾಗಿ ಬಳಸಿಕೊಳ್ಳಬೇಡಿ. ಈ ವೈರಸ್ ಅನ್ನು ದೇಶದಾದ್ಯಂತ ಹರಡಬೇಡಿ. ರಾಜಕೀಯ ಯುದ್ಧಗಳನ್ನು ಮತದಾರರ ಮುಂದೆ ಮಾಡಿ, ಅದಕ್ಕೆ ಸಂಸ್ಥೆಗಳನ್ನು ದುರ್ಬಳಕೆ ಮಾಡಿಕೊಳ್ಳುವುದೇಕೆ?” ಎಂದು ಇಡಿಯನ್ನು ಪ್ರಶ್ನಿಸಿದ ನ್ಯಾಯಪೀಠ, ತನಿಖಾ ಸಂಸ್ಥೆಯನ್ನು ತೀವ್ರವಾಗಿ ತರಾಟೆಗೆ ತೆಗೆದುಕೊಂಡಿತು.



















