ಹಾಸನ ಜಿಲ್ಲೆಯ ಚೆನ್ನರಾಯಪಟ್ಟಣ ಪುರಸಭೆಯಲ್ಲಿ ಅಧಿಕಾರಿಗಳ ಸಭೆ ಕರೆದಿದ್ದ ಸಂಸದರಿಗೆ ಅವಮಾನವೆಸಗಿರುವ ಆರೋಪವೀಗ ಕೇಳಿಬಂದಿದೆ. ಅಧಿಕಾರಿಗಳು ಹಾಗೂ ಸದಸ್ಯರ ಸಭೆಯನ್ನು ಹಾಸನ ಲೋಕಸಭಾ ಕ್ಷೇತ್ರದ ಸಂಸದ ಶ್ರೇಯಸ್ ಪಟೇಲ್ ಅವರು ಸಭೆಗೆಂದು ಬಂದಾಗ ಪುರೆಸಭೆಯ ಸಭಾಂಗಣಕ್ಕೆ ಬೀಗ ಹಾಕಿತ್ತು.
ಸಾಕಷ್ಟು ಹೊತ್ತು ಸಂಸದರು ಅಲ್ಲೇ ಕಾದು ನಿಂತರೂ ಬೀಗ ತೆರೆಯುವುದಕ್ಕೆ ಯಾರೂ ಇದ್ದಿರಲಿಲ್ಲ. ಸಿಟ್ಟಿಗೆದ್ದ ಕಾಂಗ್ರೆಸ್ ನಾಮನಿರ್ದೇಶಿತ ಸದಸ್ಯರು ಬೀಗ ಒಡೆಯುವುದಕ್ಕೆ ಮುಂದಾದ ಘಟನೆ ನಡೆದಿದೆ. ಈ ಹಿನ್ನೆಲೆಯಲ್ಲಿ ಜೆಡಿಎಸ್ ಸದಸ್ಯರು ಹಾಗೂ ಕಾಂಗ್ರೆಸ್ ನಾಮನಿರ್ದೇಶಿತ ಸದಸ್ಯರ ನಡುವೆ ಗಲಾಟೆ ನಡೆದಿದ್ದು, ಪರಸ್ಪರ ಕೈ ಕೈ ಮಿಲಾಯಿಸುವ ಹಂತಕ್ಕೆ ಹೋಗಿ ವಾಗ್ವಾದವೂ ನಡೆಯಿತು. ಬಳಿಕ ಪುರಸಭೆ ಆಡಳಿತಾಧಿಕಾರಿ ಕೀ ತಂದು ಸಭಾಂಗಣದ ಬಾಗಿಲು ತೆರೆಯುವುದಕ್ಕೆ ಹೋದಾಗ, ಕಾಂಗ್ರೆಸ್ ನಾಮ ನಿರ್ದೇಶಿತ ಸದಸ್ಯರು, ಏನ್ರೀ ನಮ್ಮ ಸಂಸದರಿಗೆ ಅವಮಾಡುತ್ತಿರೇನ್ರೀ ಎಂದು ಆಕ್ರೋಶ ಹೊರಹಾಕಿದ್ದಾರೆ.
ಈ ವೇಳೆ ಮಾತಿಗೆ ಮಾತು ಬೆಳೆದು ಗಲಾಟೆ ಜೆಡಿಎಸ್, ಕಾಂಗ್ರೆಸ್ ಕಾರ್ಯಕರ್ತರ ನಡುವೆ ಮಾತಿನ ಚಕಮಕಿ ನಡೆದಿದೆ. ಕೊನೆಗೂ ಗದ್ದಲ ನಿವಾರಿಸಿ ಸಂಸದ ಶ್ರೇಯಸ್ ಪಟೇಲ್ ಸಭೆ ನಡಿಸಿದ್ದಾರೆ.