ಯಾವುದೇ ಒಂದು ದೇಶ ಎಷ್ಟೇ ಶ್ರೀಮಂತವಾಗಿರಲಿ, ಅಲ್ಲಿನ ಜನರ ತಲಾದಾಯ ಎಷ್ಟೇ ಲಕ್ಷ, ಕೋಟಿಗಳಲ್ಲಿರಲಿ, ಆ ದೇಶದ ಮಿಲಿಟರಿ, ರಕ್ಷಣಾ ವ್ಯವಸ್ಥೆ ಬಲಿಷ್ಠವಾಗಿಲ್ಲ ಅಂದ್ರೆ, ಆ ದೇಶಕ್ಕೆ ಅಪಾಯ ಕಾದಿದೆ ಅಂತಾನೇ ಅರ್ಥ. ಇದೇ ಕಾರಣಕ್ಕೆ ಪ್ರಧಾನಿ ನರೇಂದ್ರ ಮೋದಿ ಅವರು ದೇಶದ ರಕ್ಷಣಾ ವ್ಯವಸ್ಥೆಗೆ, ಭದ್ರತೆಗೆ ಹೆಚ್ಚಿನ ಆದ್ಯತೆ ನೀಡಿದ್ದಾರೆ. ಇದರ ಪರಿಣಾಮವಾಗಿಯೇ ಪಾಕಿಸ್ತಾನವೀಗ ಬಾಲ ಮುದುರಿಕೊಂಡು ಕೂತಿದೆ. ಹಾಗಾದ್ರೆ, 11 ವರ್ಷದಲ್ಲಿ ದೇಶದ ರಕ್ಷಣಾ ಕ್ಷೇತ್ರಕ್ಕೆ ಮೋದಿ ಮಾಡಿದ್ದೇನು? ದೇಶದ ರಕ್ಷಣಾ ವ್ಯವಸ್ಥೆ ಹೇಗೆ ಬಲಿಷ್ಠವಾಗಿದೆ? ಇದೇ ಇಂದಿನ ವಿಶೇಷ, ಮೋದಿ ಡಿಫೆನ್ಸ್ ಮಾಸ್ಟರ್ ಸ್ಟ್ರೋಕ್!
ದೇಶದ ರಕ್ಷಣಾ ಬಜೆಟ್ ಗೆ ಮೋದಿ ಹೊಸ ಭಾಷ್ಯ
11 ವರ್ಷದಲ್ಲಿ ಎರಡೂವರೆ ಪಟ್ಟು ಹೆಚ್ಚಳ
ದೇಶದ ರಕ್ಷಣೆಗೆ ರಫೇಲ್ ಡೀಲ್ ಕಿಂಗ್
ಜಾಗತಿಕ ಭೌಗೋಳಿಕ ಸಂಘರ್ಷಗಳು ಮಿತಿಮೀರುತ್ತಿರುವ ಕಾರಣ ಜಗತ್ತಿನ ಎಲ್ಲ ದೇಶಗಳೂ ರಕ್ಷಣಾ ಬಜೆಟ್ ಅನ್ನು ಹೆಚ್ಚಿಸುತ್ತಿವೆ. ಇದನ್ನು ಮನಗಂಡ ಮೋದಿ ಅವರು ಕಳೆದ 11 ವರ್ಷದಲ್ಲಿ ದೇಶದ ರಕ್ಷಣಾ ಬಜೆಟ್ ಅನ್ನು 2.6 ಪಟ್ಟು ಹೆಚ್ಚಿಸಿದ್ದಾರೆ. 2013-14ರಲ್ಲಿ ದೇಶದ ರಕ್ಷಣಾ ಬಜೆಟ್ 2.53 ಲಕ್ಷ ಕೋಟಿ ರೂ. ಇತ್ತು. ಆದರೆ, 2025-26ನೇ ಬಜೆಟ್ ನಲ್ಲಿ ಈ ಮೊತ್ತವು 6.81 ಲಕ್ಷ ಕೋಟಿ ರೂ.ಗೆ ಏರಿಕೆಯಾಗಿದೆ ಅಂದ್ರೆ, ಭಾರತದ ರಕ್ಷಣಾ ಸಾಮರ್ಥ್ಯ ಹೇಗಿದೆ ಎಂಬುದಕ್ಕೆ ನಿದರ್ಶನವಾಗಿದೆ. ಅದರಲ್ಲೂ, ರಫೇಲ್ ಯುದ್ಧವಿಮಾನ, ಎಸ್-400 ಏರ್ ಡಿಫೆನ್ಸ್ ವ್ಯವಸ್ಥೆಗಳ ಖರೀದಿಯು ನಿರ್ಣಾಯಕವಾಗಿವೆ.
ರಕ್ಷಣಾ ಉತ್ಪಾದನೆಗೆ ಮೋದಿ ಮಾಸ್ಟರ್ ಸ್ಟ್ರೋಕ್
ಉತ್ಪಾದನೆ ಪ್ರಮಾಣ ಶೇ.174ರಷ್ಟು ಏರಿಕೆ
ಸಾರ್ವಕಾಲಿಕ ದಾಖಲೆ ಬರೆದ ಭಾರತ
ಮೇಕ್ ಇನ್ ಇಂಡಿಯಾ, ಆತ್ಮನಿರ್ಭರ ಭಾರತದಂತಹ ಯೋಜನೆಗಳ ಮೂಲಕ ದೇಶೀಯವಾಗಿಯೇ ರಕ್ಷಣಾ ಉತ್ಪಾದನೆಗೆ ಮೋದಿ ಸರ್ಕಾರ ಹೆಚ್ಚಿನ ಉತ್ತೇಜನ ನೀಡುತ್ತಿದೆ. ಇದರಿಂದಾಗಿಯೇ ದೇಶದ ರಕ್ಷಣಾ ಉತ್ಪಾದನೆಯಲ್ಲಿ ಶೇ.174ರಷ್ಟು ಏರಿಕೆಯಾಗಿದೆ. 2014-15ರಲ್ಲಿ ದೇಶದ ರಕ್ಷಣಾ ಉತ್ಪಾದನೆಯು 46 ಸಾವಿರ ಕೋಟಿ ರೂ. ಮೌಲ್ಯದ್ದಾಗಿತ್ತು. ಆದರೆ, ಈಗ ಅದು 1.27 ಲಕ್ಷ ಕೋಟಿ ರೂಪಾಯಿಗೆ ಏರಿಕೆಯಾಗಿದ್ದು, ಸಾರ್ವಕಾಲಿಕ ದಾಖಲೆಯಾಗಿದೆ.
ರಕ್ಷಣಾ ರಫ್ತಿನಲ್ಲೂ ಭಾರತದ ಪ್ರಾಬಲ್ಯ
11 ವರ್ಷದಲ್ಲಿ ರಕ್ಷಣಾ ರಫ್ತು 34 ಪಟ್ಟು ಹೆಚ್ಚಳ
4 ವರ್ಷಕ್ಕೆ ದೊಡ್ಡ ಗುರಿ ಇಟ್ಟ ಮೋದಿ ಸರ್ಕಾರ
ಕಳೆದ 11 ವರ್ಷದಲ್ಲಿ ದೇಶವು ರಕ್ಷಣಾ ಕ್ಷೇತ್ರದಲ್ಲೂ ಆತ್ಮನಿರ್ಭರತೆ ಸಾಧಿಸಿದೆ. ದೇಶೀಯವಾಗಿಯೇ ರಕ್ಷಣಾ ಸಾಮಗ್ರಿಗಳು, ಶಸ್ತ್ರಾಸ್ತ್ರಗಳನ್ನು ಉತ್ಪಾದಿಸಲಾಗುತ್ತಿದೆ. ಇದೇ ಕಾರಣಕ್ಕೆ ದೇಶದ ರಕ್ಷಣಾ ರಫ್ತು ಕಳೆದ 11 ವರ್ಷಗಳಲ್ಲಿ 34 ಪಟ್ಟು ಜಾಸ್ತಿಯಾಗಿದೆ. 2013-14ರಲ್ಲಿ ಭಾರತವು 686 ಕೋಟಿ ರೂ. ಮೌಲ್ಯದ ರಕ್ಷಣಾ ಸಾಮಗ್ರಿಗಳನ್ನು ರಫ್ತು ಮಾಡುತ್ತಿತ್ತು. ಆದರೀಗ ಅದು 23,622 ಕೋಟಿ ರೂಪಾಯಿಗೆ ಏರಿಕೆಯಾಗಿದೆ. ಅಷ್ಟೇ ಅಲ್ಲ, 2029ರ ವೇಳೆಗೆ ಇದನ್ನು 50 ಸಾವಿರ ಕೋಟಿ ರೂ.ಗೆ ಏರಿಸುವ ದೊಡ್ಡ ಗುರಿಯನ್ನು ಮೋದಿ ಸರ್ಕಾರ ಹೊಂದಿದೆ.
100 ದೇಶಗಳಿಗೆ ಭಾರತ ಶಸ್ತ್ರಾಸ್ತ್ರ ಪೂರೈಕೆ
ಬ್ರಹ್ಮೋಸ್ ಕ್ಷಿಪಣಿ ರಫ್ತಿನಲ್ಲೂ ಮೇಲುಗೈ
ಇದು ಮೇಕ್ ಇನ್ ಇಂಡಿಯಾದ ಪ್ರತಿಫಲ
ಅರ್ಮೇನಿಯಾ, ಮಲೇಷ್ಯಾ, ಫ್ರಾನ್ಸ್, ಅಮೆರಿಕಕ್ಕೂ ಭಾರತವೂ ರಕ್ಷಣಾ ಸಾಮಗ್ರಿಗಳನ್ನು ರಫ್ತು ಮಾಡುವಂತಾಗಿದೆ. ಪಾಕಿಸ್ತಾನದ ಮೇಲೆ ವಾಯುದಾಳಿ ನಡೆಸಿದ ಬ್ರಹ್ಮೋಸ್ ಕ್ಷಿಪಣಿಗಳಿಂದ ಹಿಡಿದು ಆರ್ಟಿಲರಿ ಗನ್ ಗಳು, ಆಕಾಶ್ ಏರ್ ಡಿಫೆನ್ಸ್ ಸಿಸ್ಟಮ್ ವರೆಗೆ ಭಾರತವು ರಫ್ತು ಮಾಡುವ ಹಂತಕ್ಕೆ ಬೆಳೆದಿದೆ. ಭಾರತವೀಗ ಸುಮಾರು 100 ದೇಶಗಳಿಗೆ ರಕ್ಷಣಾ ಸಾಮಗ್ರಿಗಳನ್ನು ರಫ್ತು ಮಾಡುತ್ತಿದೆ ಎಂದು ಕೇಂದ್ರ ಸರ್ಕಾರವೇ ಮಾಹಿತಿ ನೀಡಿದೆ. ಬ್ರಹ್ಮೋಸ್ ಕ್ಷಿಪಣಿಗಳನ್ನಂತೂ ಇಂಡೋನೇಷ್ಯಾ, ಫಿಲಿಪ್ಪೀನ್ಸ್ ದೇಶಗಳು ಮುಗಿಬಿದ್ದು ಖರೀದಿಸುತ್ತಿವೆ.
ಕಳೆದ 11 ವರ್ಷಗಳಲ್ಲಿ ಹೀಗೆ ರಕ್ಷಣಾ ಆತ್ಮನಿರ್ಭರತೆ ಸಾಧಿಸಿದ ಕಾರಣಕ್ಕಾಗಿಯೇ ಭಾರತವು ಪಾಕಿಸ್ತಾನದ ಮೇಲೆ ಮೂರು ಬಾರಿ ದಾಳಿ ನಡೆಸಿ ದಕ್ಕಿಸಿಕೊಂಡಿದೆ. ಪಹಲ್ಗಾಮ್ ದಾಳಿ ಬಳಿಕ ನಡೆಸಿದ ಪ್ರತಿದಾಳಿಗೆ ಬೆದರಿ ಪಾಕಿಸ್ತಾನವು ಮಧ್ಯಸ್ಥಿಕೆಗಾಗಿ ಅಮೆರಿಕದ ಕಾಲಿಗೆ ಎರಗಿದ್ದರ ಹಿಂದೆಯೂ ಭಾರತದ ಮಿಲಿಟರಿ ಶಕ್ತಿ ಅಡಗಿದೆ.