ಬೆಂಗಳೂರು: ದೇಶದ ಮೇಲೆ ದೊಡ್ಡ ಪ್ರಮಾಣದ ಸಾಲ ಹೊರಸಿದ್ದೇ ಪ್ರಧಾನಿ ಮೋದಿ ಸಾಧನೆ ಎಂದು ಸಿಎಂ ಸಿದ್ದರಾಮಯ್ಯ ಲೇವಡಿ ಮಾಡಿದ್ದಾರೆ.
1947 ರಿಂದ 2014 ರವರೆಗೂ ದೇಶದ ಮೇಲೆ ಕೇವಲ 54 ಲಕ್ಷ ಕೋಟಿ ರೂ. ಸಾಲ ಇತ್ತು. ಆದರೆ, ಮೋದಿ ಪ್ರಧಾನಿಯಾದ 10 ವರ್ಷಗಳಲ್ಲಿ ದೇಶದ ಸಾಲ 185 ಲಕ್ಷ ಕೋಟಿ ರೂ.ಗೆ ಏರಿಕೆಯಾಗಿದೆ. ಕೇವಲ ಮೋದಿ ಒಬ್ಬರು ತಮ್ಮ ಅವಧಿಯಲ್ಲಿ 135 ಲಕ್ಷ ಕೋಟಿ ರೂ. ಸಾಲ ಮಾಡಿ ಇಟ್ಟಿದ್ದಾರೆ. ಇದೇ ಮೋದಿ ಮಾಡಿರುವ ಸಾಧನೆ ಎಂದು ಹೇಳಿದ್ದಾರೆ.
ನರೇಂದ್ರ ಮೋದಿ ಮತ್ತು ಅಮಿತ್ ಶಾ ಜೋಡಿ ನಮ್ಮ ನಿಮ್ಮ ಬದುಕಿನ ಸಮಸ್ಯೆಗಳ ಬಗ್ಗೆ ಯಾವತ್ತೂ ಮಾತನಾಡುವುದಿಲ್ಲ. ಜಾತಿ-ಧರ್ಮದ ಹೆಸರಿನಲ್ಲಿ ಭಾರತೀಯರನ್ನು ಪರಸ್ಪರ ಕಚ್ಚಾಡಿಸಿ, ವಿಭಜನೆ ಮೂಲಕ ರಾಜಕಾರಣ ಮಾಡುತ್ತಾ ಕಾಲ ಕಳೆಯುತ್ತಿದ್ದಾರೆ ಅಷ್ಟೇ ಎಂದು ಗುಡುಗಿದ್ದಾರೆ.
ರೈತರ ಬದುಕನ್ನು ಮಾರಣ ಹೋಮ ಮಾಡುವ ಕರಾಳ ಕಾಯ್ದೆಗಳನ್ನು ಮೋದಿ ಸರ್ಕಾರ ತಂದಿತ್ತು. ಆದರೆ, ರೈತರು ಪ್ರಾಣ ಲೆಕ್ಕಿಸದೆ ಹೋರಾಟ ಮಾಡಿದ ಫಲವಾಗಿ ಕಾಯ್ದೆಗಳನ್ನು ಹಿಂಪಡೆದರು. ಮೋದಿ ಅಚ್ಛೇ ದಿನ್ ಎನ್ನುತ್ತ, ದೇಶಕ್ಕೆ ಕೆಟ್ಟ ದಿನ ತಂದಿದ್ದಾರೆ. ಮೋದಿಯವರು ಭಾರತೀಯರ ಪಾಲಿಗೆ ತಂದ ಕೆಟ್ಟ ದಿನಗಳ ಬಗ್ಗೆ ಯಾವತ್ತೂ ಅವರ ಮನ್ ಕಿ ಬಾತ್ ನಲ್ಲಿ ಮಾತನಾಡುವುದಿಲ್ಲ ಎಂದು ಆರೋಪಿಸಿದ್ದಾರೆ.