ಕನ್ನಡದಲ್ಲಿ ಸಾಕಷ್ಟು ಸದಭಿರುಚಿಯ ಚಿತ್ರಗಳನ್ನು ನಿರ್ದೇಶಿಸಿರುವ ಪಿ.ಸಿ.ಶೇಖರ್ ನಿರ್ದೇಶನದ, ಪ್ರತಿಷ್ಠಿತ ಸಂಸ್ಥೆಯ ಸಹಯೋಗದೊಂದಿಗೆ ಆಕಾಶ್ ಪಿಕ್ಚರ್ಸ್ ಲಾಂಛನದಲ್ಲಿ ಪ್ರಕಾಶ್ ಬುದ್ದೂರು ನಿರ್ಮಿಸುತ್ತಿರುವ ಮಹಾನ್ ಚಿತ್ರದಲ್ಲಿ ಮಿತ್ರ ಹೊಸ ಲುಕ್ ನಲ್ಲಿ ಕಾಣಿಸಿಕೊಂಡಿದ್ದಾರೆ.

ವಿಜಯ ರಾಘವೇಂದ್ರ ನಾಯಕರಾಗಿ ನಟಿಸುತ್ತಿರುವ “ಮಹಾನ್” ಚಿತ್ರದ ಪ್ರಮುಖಪಾತ್ರದಲ್ಲಿ ಹೆಸರಾಂತ ನಟ ಮಿತ್ರ ಅಭಿನಯಿಸುತ್ತಿದ್ದಾರೆ. “ಮಹಾನ್” ಚಿತ್ರದ ಪಾತ್ರದ ಕುರಿತು ಮಿತ್ರ ಮಾತನಾಡಿದ್ದಾರೆ.
ನಾನು “ರಾಗ” ಚಿತ್ರದ ನಂತರ ನಿರ್ದೇಶಕ ಪಿ.ಸಿ.ಶೇಖರ್ ಅವರೊಟ್ಟಿಗೆ ಕೆಲಸ ಮಾಡುತ್ತಿದ್ದೇನೆ. “ರಾಗ” ಚಿತ್ರದ ನನ್ನ ಪಾತ್ರಕ್ಕೆ ಎಲ್ಲಾ ಕಡೆ ಮೆಚ್ಚುಗೆ ವ್ಯಕ್ತವಾಗಿತ್ತು. ಈಗ “ಮಹಾನ್” ಚಿತ್ರದಲ್ಲೂ ಪ್ರಮುಖ ಪಾತ್ರದಲ್ಲಿ ಅಭಿನಯಿಸುತ್ತಿದ್ದೇನೆ. ನಿರ್ದೇಶಕರು ಈ ಚಿತ್ರದ ಕಥೆ ಹೇಳಿದ ತಕ್ಷಣ ಇಷ್ಟವಾಗಿ ನಟಿಸಲು ಒಪ್ಪಿಕೊಂಡೆ. ನಿರ್ಮಾಪಕ ಪ್ರಕಾಶ್ ಬುದ್ದೂರು ಅವರು ಇಂತಹ ಉತ್ತಮ ಕಥಾಹಂದರ ಹೊಂದಿರುವ ಚಿತ್ರವನ್ನು ನಿರ್ಮಾಣ ಮಾಡುತ್ತಿರುವುದು ಹಾಗೂ ನಟ ವಿಜಯ ರಾಘವೇಂದ್ರ ಬಹಳ ಅದ್ಭುತವಾದ ನಟ. ಅವರೊಂದಿಗೆ ನಟಿಸುತ್ತಿರುವಿದು ಬಹಳ ಖುಷಿಯಾಗಿದೆ. ಸಾಮಾಜಿಕ ಕಳಕಳಿಯುಳ್ಳ ಕಥಾಹಂದರ ಹೊಂದಿರುವ ಚಿತ್ರವನ್ನು ಪಿ.ಸಿ.ಶೇಖರ್ ನಿರ್ದೇಶಿಸುತ್ತಿದ್ದು, ಈ ಚಿತ್ರದಲ್ಲಿ ವಿಜಯ ರಾಘವೇಂದ್ರ ಅವರಿಗೆ ಹೇಳಿ ಮಾಡಿಸಿದ ಪಾತ್ರವಿದೆ. ನನ್ನ ಪಾತ್ರ ಕೂಡ ನಾಯಕನ ಪಾತ್ರದ ಜೊತೆಗೆ ಸಾಗುತ್ತದೆ. ನಮ್ಮಿಬ್ಬರ ಕಾಂಬಿನೇಶನ್ ಪ್ರೇಕ್ಷಕರಿಗೆ ಇಷ್ಟವಾಗುತ್ತದೆ ಎಂದಿದ್ದಾರೆ.

ನನ್ನ ಹಾಗೂ ಮಿತ್ರ ಅವರ ಕಾಂಬಿನೇಶನ್ ನಲ್ಲಿ ಬಂದ “ರಾಗ” ಚಿತ್ರ ಇಂದು ಕೂಡ ಜನಪ್ರಿಯ. ಆನಂತರ ನನ್ನ ನಿರ್ದೇಶನದ ಚಿತ್ರಗಳಲ್ಲಿ ಮಿತ್ರ ಅವರು ನಟಿಸಿಲ್ಲ. ಏಕೆಂದರೆ, ಮಿತ್ರ ಅವರು ಸಣ್ಣ ಪುಟ್ಟ ಪಾತ್ರದಲ್ಲಿ ನನ್ನ ನಿರ್ದೇಶನದ ಚಿತ್ರದಲ್ಲಿ ಅಭಿನಯಿಸುವುದು ನನಗೆ ಇಷ್ಟವಿಲ್ಲ. “ರಾಗ” ಚಿತ್ರದ ಅಭಿನಯಕ್ಕಾಗಿ ಮಿತ್ರ ಅವರಿಗೆ ರಾಜ್ಯ ಪ್ರಶಸ್ತಿ ಬಂದಿತ್ತು. ಆ ಚಿತ್ರದಲ್ಲಿ ಅಂತಹ ಅದ್ಭುತ ನಟನೆ ನೀಡಿದ್ದ ಮಿತ್ರ ಅವರಿಗೆ “ಮಹಾನ್” ಚಿತ್ರದಲ್ಲೂ ಎಲ್ಲರ ನೆನಪಿನಲ್ಲುಳಿಯುವಂತ ಪಾತ್ರ ಇರುತ್ತದೆ. ಚಿತ್ರಕಥೆ ಬರೆಯುವಾಗ ಈ ಪಾತ್ರಕ್ಕೆ ಮಿತ್ರ ಅವರೆ ಸೂಕ್ತ ಎನಿಸಿತು. ಅವರಿಗೆ ಸರಿಯಾದ ಪಾತ್ರವಿದು. ಇಡೀ ಚಿತ್ರ ಪೂರ್ತಿ ನಾಯಕನ ಪಾತ್ರದ ಜೊತೆಗೆ ಸಾಗುವ ಪಾತ್ರ ಅವರದು. ಕುರುಕ್ಷೇತ್ರದಲ್ಲಿ ಅರ್ಜುನನ ಜೊತೆಗೆ ಶ್ರೀಕೃಷ್ಣ ಸದಾ ಇರುತ್ತಾನೆ. ಆ ಸ್ಪೂರ್ತಿಯಿಂದ ಈ ಎರಡು ಪಾತ್ರಗಳನ್ನು ಹೆಣೆಯಲಾಗಿದೆ. “ಮಹಾನ್” ಚಿತ್ರದ ಮಿತ್ರ ಅವರ ಪಾತ್ರ ಕೂಡ ಎಲ್ಲರ ಮನಸ್ಸಿಗೂ ಇಷ್ಟವಾಗುತ್ತದೆ ಎಂದು ನಿರ್ದೇಶಕ ಪಿ.ಸಿ.ಶೇಖರ್ ತಿಳಿಸಿದ್ದಾರೆ.

ತಮ್ಮ ಸಂಸ್ಥೆಯ ಮೊದಲ ನಿರ್ಮಾಣದ ಚಿತ್ರದಲ್ಲಿ ಮಿತ್ರ ಅವರಂತಹ ಅನುಭವಿ ನಟರು ಅಭಿನಯಿಸುತ್ತಿರುವುದಕ್ಕೆ ನಿರ್ಮಾಪಕ ಪ್ರಕಾಶ್ ಬುದ್ದೂರು ಸಂತಸ ವ್ಯಕ್ತಪಡಿಸಿದ್ದಾರೆ.