ಬೆಂಗಳೂರು ಗ್ರಾಮಾಂತರ: ನೂತನ ಮನೆಯ ಗೃಹ ಪ್ರವೇಶ ಸಮಾರಂಭದ ಅಡುಗೆ ಕೆಲಸಕ್ಕೆಂದು ಬಂದಿದ್ದ ಅಪ್ರಾಪ್ತ ಬಾಲಕ ಅನುಮಾನಾಸ್ಪದವಾಗಿ ಸಾವನ್ನಪ್ಪಿರುವ ಘಟನೆ ನಡೆದಿದೆ.
ಹೇಮಂತ (17) ಸಾವನ್ನಪ್ಪಿರುವ ಬಾಲಕ ಎನ್ನಲಾಗಿದೆ. ದೊಡ್ಡಬಳ್ಳಾಪುರ ನಗರದ ಜಾಲಪ್ಪ ಕಾಲೇಜು ರಸ್ತೆಯ ಅಶ್ವತ್ಥಪ್ಪನವರ ಮನೆ ಬಳಿ ಈ ಘಟನೆ ನಡೆದಿದೆ. ಹೇಮಂತ್ ಚಿಕ್ಕಬಳ್ಳಾಪುರ ಜಿಲ್ಲೆಯ ಗಂಗರೇ ಕಾಲುವೆ ನಿವಾಸಿ ಎನ್ನಲಾಗಿದೆ.
ಶಾಮಿಯಾನ ಬಿಚ್ಚಲು ಹೋಗಿ ವಿದ್ಯುತ್ ಶಾಕ್ ಹೊಡೆದು ಬಾಲಕ ಸಾವನ್ನಪ್ಪಿರುವ ಶಂಕೆ ವ್ಯಕ್ತವಾಗಿದೆ. ವಿದ್ಯುತ್ ಸ್ಪರ್ಶಿಸಿದ ಕೂಡಲೇ ಮೇಲಿನಿಂದ ಕೆಳಗೆ ಬಿದ್ದು ಸ್ಥಳದಲ್ಲೇ ಸಾವನಪ್ಪಿರುವುದಾಗಿ ಪೋಷಕರು ಆರೋಪಿಸಿದ್ದಾರೆ. ಬಾಲ ಕಾರ್ಮಿಕನನ್ನು ಕೆಲಸಕ್ಕೆ ಕರೆದುಕೊಂಡು, ಕೆಲಸ ಮಾಡಿಸಿರುವ ಗುತ್ತಿಗೆದಾರನ ವಿರುದ್ಧ ಪೋಷಕರು ಸದ್ಯ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಗುತ್ತಿಗೆದಾರ ಗಂಗರಾಜು ಈ ಸಾವಿಗೆ ಕಾರಣ ಎಂದು ಆರೋಪಿಸಿದ್ದಾರೆ.
ಈ ಕುರಿತು ಪೊಲೀಸ್ ಠಾಣೆಯಲ್ಲಿ ಕೇವಲ ಯು.ಡಿ.ಆರ್.ದಾಖಲಿಸಿ ನನ್ನ ಮಗನ ಸಾವಿಗೆ ನ್ಯಾಯ ಕೊಡಿಸಿಲ್ಲ ಎಂದು ಕುಟುಂಬಸ್ಥರು ಆರೋಪಿಸಿದ್ದಾರೆ. ಈ ಕುರಿತು ಪೋಷಕರು ದೊಡ್ಡಬಳ್ಳಾಪುರ ಗ್ರಾಮಾಂತರ ಪೊಲೀಸ್ ಠಾಣೆಗೆ ದೂರು ಸಲ್ಲಿಸಿದ್ದಾರೆ. ಈ ಘಟನೆ ಜೂನ್ 15ರಂದು ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ. ಈ ಕುರಿತು ಪೊಲೀಸರು ತನಿಖೆ ನಡೆಸುತ್ತಿದ್ದಾರೆ.