ಚಿತ್ರದುರ್ಗ: ಸಾಲ ಕಟ್ಟುವಂತೆ ಮನೆ ಬಳಿ ಮೈಕ್ರೋ ಫೈನಾನ್ಸ್ ಸಿಬ್ಬಂದಿ ಗಲಾಟೆ ಮಾಡಿದ ಹಿನ್ನಲೆ ಜನನ ಅವಮಾನದಿಂದ ಮನನೊಂದ ಮಹಿಳೆಯೊಬ್ಬಳು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಚಿತ್ರದುರ್ಗ ನಗರದ ಹೊರ ವಲಯದ ಕವಾಡಿಗರಹಟ್ಟಿ ಗ್ರಾಮದಲ್ಲಿ ನಡೆದಿದೆ.
ನೇತ್ರಾವತಿ (35) ಎಂಬಾಕೆ ಆತ್ಮಹತ್ಯೆ ಮಾಡಿಕೊಂಡ ಮಹಿಳೆ.
ಎಕ್ವಿಟ್ ಹೌಸ್ ಮೈಕ್ರೋ ಪೈನಾನ್ಸ್ ಸಿಬ್ಬಂದಿ ಸಂಜೆ ವೇಳೆಗೆ 50 ಸಾವಿರ ಸಾಲ ಕಟ್ಟುವಂತೆ ಗಲಾಟೆ ಮಾಡಿದ್ದ, ಸಾಲ ಕಟ್ಟದಿದ್ದರೆ ಮತ್ತೆ ಬರುತ್ತೇವೆ ಎಂದು ಧಮ್ಕಿ ಹಾಕಿದ್ದ ಎಂದು ಆರೋಪಿಸಲಾಗಿದೆ.
ಗ್ರಾಮದ ಜನರೆದುರು ಅವಾಚ್ಯ ಶಬ್ದಗಳಿಂದ ನಿಂದನೆ, ಬೈಗುಳದಿಂದ ಅವಮಾನಗೊಂಡ ನೇತ್ರಾವತಿ ನೇಣಿಗೆ ಶರಣಾಗಿದ್ದಾಳೆ. ನೇತ್ರಾವತಿಯ ಸಾವಿನಿಂದ ಇಬ್ಬರು ಮಕ್ಕಳು ಅನಾಥವಾಗಿದ್ದು, ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ.
ಸ್ಥಳಕ್ಕೆ ಕೋಟೆ ಠಾಣೆಯ ಪೊಲೀಸರು ಬೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಮೈಕ್ರೋ ಫೈನಾನ್ಸ್ ಸಿಬ್ಬಂದಿಯ ವಿರುದ್ದ ಕ್ರಮ ಕೈಗೊಳ್ಳುವಂತೆ ಕುಟುಂಬಸ್ಥರು ಆಗ್ರಹಿಸಿದ್ದಾರೆ.



















