ನವದೆಹಲಿ: ಅಮೆರಿಕದ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮತ್ತು ಟೆಸ್ಲಾ ಸಿಇಒ ಎಲಾನ್ ಮಸ್ಕ್ ನಡುವೆ ತೆರಿಗೆ ಮಸೂದೆಯ ಕುರಿತ ವಾಕ್ಸಮರ ತಾರಕಕ್ಕೇರಿದೆ. “ಬಿಗ್ ಬ್ಯೂಟಿಫುಲ್ ಬಿಲ್” ಎಂದು ಕರೆಯಲಾಗುವ ಟ್ರಂಪ್ ಅವರ ಮಹತ್ವಾಕಾಂಕ್ಷಿ ತೆರಿಗೆ ವಿಧೇಯಕವನ್ನು ಖಂಡಿಸಿ ಟ್ರಂಪ್ ಅವರನ್ನು ಎಲಾನ್ ಮಸ್ಕ್ ಮತ್ತೆ ಟೀಕಿಸಿದ ಬೆನ್ನಲ್ಲೇ, ಕೆರಳಿರುವ ಟ್ರಂಪ್ ಮಸ್ಕ್ ಅನ್ನು “ಇತಿಹಾಸದಲ್ಲೇ ಅತಿ ಹೆಚ್ಚು ಸಹಾಯಧನ ಪಡೆದ ವ್ಯಕ್ತಿ” ಎಂದಿದ್ದಾರೆ. ನಾವು ಕೊಟ್ಟಿರುವ ಆರ್ಥಿಕ ನೆರವು ಇಲ್ಲದಿರುತ್ತಿದ್ದರೆ ಮಸ್ಕ್ ತಮ್ಮ ವ್ಯವಹಾರ, ಅಂಗಡಿಗಳನ್ನು ಮುಚ್ಚಿ ದಕ್ಷಿಣ ಆಫ್ರಿಕಾಕ್ಕೆ ಮರಳಬೇಕಾಗುತ್ತದೆ ಎಂದು ಟ್ರಂಪ್ ತಮ್ಮ ಟ್ರೂತ್ ಸೋಷಿಯಲ್‌ನಲ್ಲಿ ವ್ಯಂಗ್ಯವಾಡಿದ್ದಾರೆ.
ಟೆಸ್ಲಾ ಸಿಇಒ ನೇತೃತ್ವದ ವೆಚ್ಚ ಕಡಿತ ವಿಭಾಗವಾದ ಡಿಒಜಿಇ (DOGE), ಮಸ್ಕ್ ಅವರ ಸರ್ಕಾರಿ ಸಹಾಯಧನಗಳು ಮತ್ತು ಒಪ್ಪಂದಗಳನ್ನು ಮರುಪರಿಶೀಲಿಸಬೇಕು ಎಂದು ಟ್ರಂಪ್ ಸೂಚಿಸಿದ್ದಾರೆ. “ಎಲಾನ್ ಇತಿಹಾಸದಲ್ಲೇ ಅತಿ ಹೆಚ್ಚು ಸಹಾಯಧನ ಪಡೆದ ವ್ಯಕ್ತಿಯಾಗಿದ್ದು, ಅದಿಲ್ಲದಿದ್ದರೆ ಅವರು ಬಹುಶಃ ತನ್ನ ವ್ಯವಹಾರವನ್ನು ಮುಚ್ಚಿ ದಕ್ಷಿಣ ಆಫ್ರಿಕಾಕ್ಕೆ ಹಿಂದಿರುಗಬೇಕಾಗಬಹುದು,” ಎಂದು ಟ್ರಂಪ್ ಪೋಸ್ಟ್ ಮಾಡಿದ್ದಾರೆ.
ಇವಿ ಆದೇಶವೇ ವಿವಾದದ ಕೇಂದ್ರಬಿಂದು
ಟ್ರಂಪ್ ಮತ್ತು ಮಸ್ಕ್ ನಡುವಿನ ಈ ದ್ವೇಷದ ಕೇಂದ್ರಬಿಂದು, ಎಲೆಕ್ಟ್ರಿಕ್ ವಾಹನಗಳಿಗೆ (ಇವಿ) ನೀಡಲಾಗುವ $7,500 ಗ್ರಾಹಕ ತೆರಿಗೆ ಕ್ರೆಡಿಟ್ ಕೊನೆಗೊಳಿಸುವ ಈ ಮಸೂದೆಗೆ ಸಂಬಂಧಿಸಿದೆ. ಇದು ಎಲೆಕ್ಟ್ರಿಕ್ ವಾಹನಗಳನ್ನು ಹೆಚ್ಚು ದುಬಾರಿಯಾಗಿಸಲಿದ್ದು, ಟೆಸ್ಲಾ ಸಿಇಒ ಇದನ್ನು ವಿರೋಧಿಸಿದ್ದಾರೆ. ಇನ್ನೊಂದೆಡೆ, ತಾನು ಯಾವಾಗಲೂ ಎಲೆಕ್ಟ್ರಿಕ್ ವಾಹನಗಳನ್ನು ಕಡ್ಡಾಯಗೊಳಿಸುವ ಆದೇಶವನ್ನು ವಿರೋಧಿಸುವುದಾಗಿ ಟ್ರಂಪ್ ಹೇಳಿದ್ದಾರೆ. ಜೋ ಬೈಡನ್-ಯುಗದ ಈ ನೀತಿಯನ್ನು ಟ್ರಂಪ್ “ಹಾಸ್ಯಾಸ್ಪದ” ಎಂದು ಕರೆದಿದ್ದು, ಇದು ತಮ್ಮ ಚುನಾವಣಾ ಪ್ರಚಾರದ ಪ್ರಮುಖ ಭಾಗವಾಗಿತ್ತು ಎಂದೂ ಹೇಳಿದ್ದಾರೆ.
“ನಾನು ಅಧ್ಯಕ್ಷನಾಗಿ ಅವರಿಗೆ (ಮಸ್ಕ್) ಬೆಂಬಲ ನೀಡುವ ಬಹಳ ಹಿಂದೆಯೇ, ನಾನು ಇವಿ ಆದೇಶದ ವಿರುದ್ಧವಾಗಿದ್ದೇನೆಂದು ಎಲಾನ್ ಮಸ್ಕ್‌ಗೆ ತಿಳಿದಿತ್ತು. ಎಲೆಕ್ಟ್ರಿಕ್ ಕಾರುಗಳು ಚೆನ್ನಾಗಿವೆ. ಹಾಗಂತ ಪ್ರತಿಯೊಬ್ಬರೂ ಕಡ್ಡಾಯವಾಗಿ ವಿದ್ಯುತ್ ಚಾಲಿತ ವಾಹವನ್ನೇ ಹೊಂದುವಂತೆ ಹೇರಿಕೆ ಮಾಡುವುದು ಸರಿಯಲ್ಲ,” ಎಂದೂ ಟ್ರಂಪ್ ವಾದಿಸಿದ್ದಾರೆ.
ಒಂದು ಕಾಲದಲ್ಲಿ ಟ್ರಂಪ್‌ಗೆ ಆಪ್ತರಾಗಿದ್ದ ಮಸ್ಕ್, ಕಳೆದ ಒಂದು ತಿಂಗಳಿಂದ $4 ಟ್ರಿಲಿಯನ್ ಖರ್ಚು ಮತ್ತು ತೆರಿಗೆ ಮಸೂದೆಯ ಕುರಿತು ಅಧ್ಯಕ್ಷರೊಂದಿಗೆ ಬಹಿರಂಗ ಜಗಳಕ್ಕಿಳಿದಿದ್ದಾರೆ. ಈಗ ತಮ್ಮ ವಾಗ್ದಾಳಿಯನ್ನು ಮತ್ತಷ್ಟು ತೀವ್ರಗೊಳಿಸಿದ್ದು, ಈ ಮಸೂದೆ ಸೆನೆಟ್‌ನಲ್ಲಿ ಅನುಮೋದನೆಗೊಂಡರೆ ಅಮೆರಿಕದಲ್ಲಿ ಹೊಸ ಪಕ್ಷವನ್ನು ಪ್ರಾರಂಭಿಸುವುದಾಗಿಯೂ ಮಸ್ಕ್ ಬೆದರಿಕೆ ಹಾಕಿದ್ದಾರೆ.
ವಿಶ್ವದ ಅತಿ ಶ್ರೀಮಂತ ವ್ಯಕ್ತಿಯಾದ ಮಸ್ಕ್, ಈ ಮಸೂದೆಯಿಂದ ರಾಷ್ಟ್ರೀಯ ಸಾಲದ ಮೊತ್ತಕ್ಕೆ 3 ಲಕ್ಷಕೋಟಿ ಡಾಲರ್ ನಷ್ಟು ಸೇರ್ಪಡೆಯಾಗಲಿದೆ. ಇದು ದೇಶವನ್ನು ದಿವಾಳಿಯಾಗಿಸಲಿದೆ ಎಂದು ಹೇಳಿದ್ದಾರೆ. ಇದನ್ನು “ಸಾಲದ ಗುಲಾಮಗಿರಿ ಮಸೂದೆ” ಎಂದು ಕರೆದಿರುವ ಮಸ್ಕ್, “ಈ ಮಸೂದೆಯ ಹುಚ್ಚು ಖರ್ಚುವೆಚ್ಚದೊಂದಿಗೆ, ದಾಖಲೆಯ 5 ಟ್ರಿಲಿಯನ್ ಡಾಲರ್‌ಗಳಷ್ಟು ಸಾಲದ ಮಿತಿಯನ್ನು ಹೆಚ್ಚಿಸುತ್ತದೆ. ಇದರಿಂದ ನಾವು ಏಕ-ಪಕ್ಷದ ದೇಶದಲ್ಲಿ ಜೀವಿಸುತ್ತೇವೆ ಎಂಬುದು ಸ್ಪಷ್ಟವಾಗಿದೆ – ಪಿಗ್ಗಿ ಪಿಗ್ ಪಕ್ಷ!! ಜನರ ಬಗ್ಗೆ ನಿಜವಾಗಿಯೂ ಕಾಳಜಿ ವಹಿಸುವ ಹೊಸ ರಾಜಕೀಯ ಪಕ್ಷಕ್ಕೆ ಇದು ಸುಸಮಯ,” ಎಂದು ಟ್ವೀಟ್ ಮಾಡಿದ್ದಾರೆ.
ಅಮೆರಿಕದ ಉಪಾಧ್ಯಕ್ಷ ಜೆಡಿ ವ್ಯಾನ್ಸ್ ಕೂಡ ಮಸೂದೆಯ ವಿಮರ್ಶಕರನ್ನು ತರಾಟೆಗೆ ತೆಗೆದುಕೊಂಡಿದ್ದು, ಮಸ್ಕ್‌ಗೆ ಪರೋಕ್ಷವಾಗಿ ತಿರುಗೇಟು ನೀಡಿದ್ದಾರೆ. “ದೇಶವನ್ನು ಅಕ್ರಮ ವಲಸೆಯಿಂದ ತುಂಬುವುದು ಮತ್ತು ನಂತರ ಆ ವಲಸಿಗರಿಗೆ ಉದಾರವಾದ ಪ್ರಯೋಜನಗಳನ್ನು ನೀಡುವುದರಿಂದ ನಮ್ಮ ದೇಶ ದಿವಾಳಿಯಾಗುತ್ತದೆಯೇ ಹೊರತು ಹೊಸ ಮಸೂದೆಯಿಂದಲ್ಲ. ‘ದಿ ಒನ್ ಬಿಗ್ ಬ್ಯೂಟಿಫುಲ್ ಬಿಲ್’ ಎಲ್ಲ ಸಮಸ್ಯೆಯನ್ನು ನಿವಾರಿಸುತ್ತದೆ. ಆದ್ದರಿಂದ ಅದು ಅಂಗೀಕಾರ ಆಗಲೇಬೇಕು,” ಎಂದು ಟ್ವೀಟ್ ಮಾಡಿದ್ದಾರೆ.