ಹೈದರಾಬಾದ್: ತೆಲಂಗಾಣದ ಸಂಗಾರೆಡ್ಡಿ ಜಿಲ್ಲೆಯ ಪಾಶಮೈಲಾರಾಮ್‌ನಲ್ಲಿರುವ ಸಿಗಾಚಿ ಇಂಡಸ್ಟ್ರೀಸ್ ಔಷಧ ಘಟಕದಲ್ಲಿ ಸೋಮವಾರ ಸಂಭವಿಸಿದ ರಿಯಾಕ್ಟರ್ ಸ್ಫೋಟದಿಂದ ಮೃತರ ಸಂಖ್ಯೆ 35ಕ್ಕೆ ಏರಿದೆ. ರಕ್ಷಣಾ ಕಾರ್ಯಕರ್ತರು ಘಟನಾ ಸ್ಥಳದಿಂದ ಭಗ್ನಾವಶೇಷಗಳನ್ನು ತೆರವುಗೊಳಿಸುತ್ತಿದ್ದು, ಘಟನೆ ಕುರಿತು ಸರ್ಕಾರ ತನಿಖೆಗೆ ಆದೇಶಿಸಿದೆ.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪಾರಿತೋಷ್ ಪಂಕಜ್ ಮಂಗಳವಾರ, ಮೃತಪಟ್ಟವರ ಸಂಖ್ಯೆಯನ್ನು ದೃಢಪಡಿಸಿದ್ದು, “ಅವಶೇಷಗಳನ್ನು ತೆರವುಗೊಳಿಸುವಾಗ ಹಲವು ದೇಹಗಳು ಪತ್ತೆಯಾಗಿವೆ. 31 ಮೃತದೇಹಗಳನ್ನು ಹೊರತೆಗೆಯಲಾಗಿದೆ, ಮೂವರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾಗ ಸಾವನ್ನಪ್ಪಿದ್ದಾರೆ. ರಕ್ಷಣಾ ಕಾರ್ಯಾಚರಣೆ ಅಂತಿಮ ಹಂತದಲ್ಲಿದೆ” ಎಂದು ತಿಳಿಸಿದ್ದಾರೆ.
ತೆಲಂಗಾಣ ಮುಖ್ಯಮಂತ್ರಿ ಎ. ರೇವಂತ್ ರೆಡ್ಡಿ ತಮ್ಮ ಕೆಲವು ಸಂಪುಟ ಸದಸ್ಯರೊಂದಿಗೆ ಸ್ಫೋಟ ನಡೆದ ಸ್ಥಳಕ್ಕೆ ಭೇಟಿ ನೀಡಿದ್ದಾರೆ. ಆರೋಗ್ಯ ಸಚಿವ ಸಿ. ದಾಮೋದರ್ ರಾಜನರಸಿಂಹ ಅವರು ಮುಖ್ಯಮಂತ್ರಿಗಳ ಭೇಟಿಯನ್ನು ದೃಢಪಡಿಸಿ, ರಾಜ್ಯ ಸರ್ಕಾರ ಅಗತ್ಯವಿರುವ ಎಲ್ಲ ಕ್ರಮಗಳನ್ನು ಕೈಗೊಳ್ಳಲಿದೆ ಎಂದು ತಿಳಿಸಿದ್ದಾರೆ.
ಜೂನ್ 30ರ ಸೋಮವಾರ ಬೆಳಿಗ್ಗೆ 8:15 ರಿಂದ 9:35 ರ ನಡುವೆ ರಿಯಾಕ್ಟರ್ ಒಳಗೆ ಸಂಭವಿಸಿದ ರಾಸಾಯನಿಕ ಕ್ರಿಯೆಯಿಂದ ಸ್ಫೋಟ ಸಂಭವಿಸಿದೆ ಎಂದು ಶಂಕಿಸಲಾಗಿದೆ. ಈ ಸ್ಫೋಟವು ಔಷಧ ಘಟಕದ ಶೆಡ್ ಅನ್ನು ಸಂಪೂರ್ಣವಾಗಿ ನೆಲಸಮಗೊಳಿಸಿದ್ದು, ಅಲ್ಲಿ ಕಾರ್ಯನಿರ್ವಹಿಸುತ್ತಿದ್ದ ಕಾರ್ಮಿಕರ ದೇಹಗಳು ಹಲವಾರು ಅಡಿ ದೂರಕ್ಕೆ ಚಿಮ್ಮಲ್ಪಟ್ಟು, ಸುಟ್ಟುಕರಕಲಾಗಿವೆ.

ಗಾಯಾಳುಗಳ ಗುರುತು ಪತ್ತೆ:
ಮಿಯಾಪೂರ್‌ನಲ್ಲಿರುವ ಪ್ರಣಾಮ್ ಆಸ್ಪತ್ರೆಗೆ ಸೋಮವಾರ 21 ರೋಗಿಗಳು ಸುಟ್ಟ ಗಾಯಗಳು ಮತ್ತು ತಲೆಗೆ ಪೆಟ್ಟಾದ ಸ್ಥಿತಿಯಲ್ಲಿ ದಾಖಲಾಗಿದ್ದರು. ಅವರಲ್ಲಿ ಇಬ್ಬರು ಈಗಾಗಲೇ ಮೃತಪಟ್ಟಿದ್ದು, ಒಬ್ಬರು ಇಂದು ಬೆಳಿಗ್ಗೆ ನಿಧನರಾದರು ಎಂದು ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಪಟಾಂಚೇರುವಿನಲ್ಲಿರುವ ಧ್ರುವ ಆಸ್ಪತ್ರೆಗೆ 11 ರೋಗಿಗಳನ್ನು ದಾಖಲಿಸಲಾಗಿದ್ದು, ಅವರಲ್ಲಿ ಇಬ್ಬರನ್ನು ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಗಳಿಗೆ ವರ್ಗಾಯಿಸಲಾಗಿದೆ. ಉಳಿದ ಒಂಬತ್ತು ರೋಗಿಗಳಲ್ಲಿ ಐವರು ವೆಂಟಿಲೇಟರ್‌ಗಳಲ್ಲಿದ್ದಾರೆ. ಏಳು ರೋಗಿಗಳಿಗೆ 40-80% ಸುಟ್ಟ ಗಾಯಗಳಾಗಿವೆ ಮತ್ತು ಇಬ್ಬರಿಗೆ 10% ಸುಟ್ಟ ಗಾಯಗಳಾಗಿವೆ ಎಂದು ಆಸ್ಪತ್ರೆಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಮೃತದೇಹಗಳ ಗುರುತು ಪತ್ತೆ ಕಾರ್ಯ ಸವಾಲಾಗಿದೆ. ಇದುವರೆಗೆ ಕೇವಲ ಒಂಬತ್ತು ದೇಹಗಳ ಗುರುತನ್ನು ಮಾತ್ರ ದೃಢಪಡಿಸಲಾಗಿದೆ ಎಂದು ಕಂದಾಯ ಇಲಾಖೆಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಉಳಿದ ಮೃತದೇಹಗಳ ಗುರುತು ಪತ್ತೆಗೆ ಡಿಎನ್‌ಎ ಪರೀಕ್ಷೆ ಅಗತ್ಯವಿದೆ. ಮೃತಪಟ್ಟವರಲ್ಲಿ ಹೆಚ್ಚಿನವರು ಒಡಿಶಾ, ಪಶ್ಚಿಮ ಬಂಗಾಳ ಮತ್ತು ಬಿಹಾರದಂತಹ ರಾಜ್ಯಗಳವರಾಗಿದ್ದಾರೆ.
ರಕ್ಷಣಾ ಕಾರ್ಯಾಚರಣೆ ಮತ್ತು ತನಿಖಾ ಸಮಿತಿ:
ಎನ್‌ಡಿಆರ್‌ಎಫ್, ಎಸ್‌ಡಿಆರ್‌ಎಫ್, ಸ್ಥಳೀಯ ಅಗ್ನಿಶಾಮಕ ಸಿಬ್ಬಂದಿ ಮತ್ತು ಪೊಲೀಸರನ್ನು ರಕ್ಷಣಾ ಮತ್ತು ಅಗ್ನಿಶಾಮಕ ಕಾರ್ಯಾಚರಣೆಗಳಿಗಾಗಿ ನಿಯೋಜಿಸಲಾಗಿದ್ದು, ಈ ವೇಳೆ ಎರಡು ಅಗ್ನಿಶಾಮಕ ರೋಬೋಟ್‌ಗಳನ್ನು ಸಹ ಬಳಸಲಾಗಿದೆ.
ಈ ಮಧ್ಯೆ, ಸಿಗಾಚಿ ಇಂಡಸ್ಟ್ರೀಸ್ ಲಿಮಿಟೆಡ್ ತನ್ನ ಉತ್ಪಾದನಾ ಮೂಲಸೌಕರ್ಯಕ್ಕೆ ವ್ಯಾಪಕ ಹಾನಿಯಾಗಿದೆ ಎಂದು ಉಲ್ಲೇಖಿಸಿ, ಸಂಗಾರೆಡ್ಡಿ ಘಟಕದಲ್ಲಿ 90 ದಿನಗಳ ಕಾಲ ಕಾರ್ಯಾಚರಣೆಯನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಿದೆ. ಕಂಪನಿಯು ತನ್ನ ವೆಬ್‌ಸೈಟ್ ಪ್ರಕಾರ, ಆಕ್ಟಿವ್ ಫಾರ್ಮಾಸ್ಯುಟಿಕಲ್ ಇಂಗ್ರಿಡಿಯೆಂಟ್ಸ್ (API), ಮಧ್ಯವರ್ತಿಗಳು, ಎಕ್ಸಿಪಿಯೆಂಟ್‌ಗಳನ್ನು ತಯಾರಿಸುತ್ತದೆ. ಕಾರ್ಯಾಚರಣೆ ಹಾಗೂ ನಿರ್ವಹಣಾ ಸೇವೆಗಳನ್ನು ಒದಗಿಸುತ್ತದೆ.
ರಾಜ್ಯ ಸರ್ಕಾರವು ಸ್ಫೋಟದ ಕಾರಣವನ್ನು ತನಿಖೆ ಮಾಡಲು ಮತ್ತು ಸುರಕ್ಷತಾ ಕ್ರಮಗಳನ್ನು ಶಿಫಾರಸು ಮಾಡಲು ಐದು ಸದಸ್ಯರ ಸಮಿತಿಯನ್ನು ರಚಿಸಿದೆ. ಪ್ರಧಾನಮಂತ್ರಿ ನರೇಂದ್ರ ಮೋದಿ ಕೂಡ ದುರಂತದ ಬಗ್ಗೆ ಸಂತಾಪ ವ್ಯಕ್ತಪಡಿಸಿದ್ದು, ಸಂತ್ರಸ್ತರ ಕುಟುಂಬಗಳಿಗೆ ತಲಾ 2 ಲಕ್ಷ ರೂ. ಪರಿಹಾರ ಘೋಷಿಸಿದ್ದಾರೆ.