ಲೆಜೆಂಡ್ಸ್ ಲೀಗ್ ಕ್ರಿಕೆಟ್ ಟೂರ್ನಿಯಲ್ಲಿ ಕೋನಾರ್ಕ್ ಸೂರ್ಯಸ್ ಒಡಿಶಾ ಮತ್ತು ಸದರ್ನ್ ಸೂಪರ್ ಸ್ಟಾರ್ಸ್ ತಂಡಗಳು ಮುಖಾಮುಖಿಯಾಗಿದ್ದವು. ಟಾಸ್ ಗೆದ್ದಿದ್ದ ಸರ್ದನ್ ಸೂಪರ್ ಸ್ಟಾರ್ಸ್ ತಂಡ ಮೊದಲು ಬೌಲಿಂಗ್ ಆಯ್ದುಕೊಂಡಿತ್ತು.
ಬ್ಯಾಟಿಂಗ್ ಆರಂಭಿಸಿದ ಕೋನಾರ್ಕ್ ಸೂರ್ಯಸ್ ಒಡಿಶಾ ಪರ ಆರಂಭಿಕ ಆಟಗಾರ ರಿಚರ್ಡ್ ಲೆವಿ 21 ಎಸೆತಗಳಲ್ಲಿ 4 ಸಿಕ್ಸ್ ಹಾಗೂ 9 ಬೌಂಡರಿಗಳೊಂದಿಗೆ 63 ರನ್ ಗಳಿಸಿದರು. ಮಧ್ಯಮ ಕ್ರಮಾಂಕದಲ್ಲಿ ಬಂದ ಯೂಸುಫ್ ಪಠಾಣ್ 33 ರನ್ ಗಳಿಸಿದರು. ಅಂತಿಮವಾಗಿ ಕೋನಾರ್ಕ್ ಸೂರ್ಯಸ್ ಒಡಿಶಾ ತಂಡವು 20 ಓವರ್ಗಳಲ್ಲಿ 9 ವಿಕೆಟ್ ಕಳೆದುಕೊಂಡು 192 ರನ್ ಗಳಿಸಿತು.
ಗುರಿ ಬೆನ್ನಟ್ಟಿದ ಸದರ್ನ್ ಸೂಪರ್ ಸ್ಟಾರ್ಸ್ ತಂಡಕ್ಕೆ ಆರಂಭಿಕ ಆಘಾತ ಕಾಡಿತ್ತು. ಶ್ರೀವಾತ್ಸವ್ ಗೋಸ್ವಾಮಿ ಕೇವಲ 18 ರನ್ಗಳಿಸಿ ಔಟಾಗಿದ್ದರು. ಇದರ ಮಧ್ಯೆಯೂ ಮಾರ್ಟಿನ್ ಗಪ್ಟಿಲ್ ಮಾತ್ರ ಭರ್ಜರಿ ಆಟ ಪ್ರದರ್ಶಿಸಿದರು. ನವಿನ್ ಸ್ಟಿವರ್ಟ್ ಎಸೆದ 6ನೇ ಓವರ್ ನಲ್ಲಿ 6, 6, 6, 4, 6, 6 ಸಿಡಿಸುವ ಮೂಲಕ 34 ರನ್ ಗಳಿಸಿದರು. ಹೀಗಾಗಿ ಕೇವಲ 48 ಎಸೆತಗಳಲ್ಲಿ ಶತಕ ಪೂರೈಸಿದರು.
ನಂತರ ನವಿನ್ ಸ್ಟಿವರ್ಟ್ ಎಸೆದ 15ನೇ ಓವರ್ ನಲ್ಲಿ 6, 6, 6, 4, 6 ಗಳಿಸಿದರು. ಹೀಗಾಗಿ ಕೇವಲ 11 ಎಸೆತಗಳಲ್ಲಿ 62 ರನ್ ಗಳಿಸಿದರು. ಒಟ್ಟಾರೆ ಅಜೇಯ 131 ರನ್ ಗಳಿಸುವ ಮೂಲಕ 16ನೇ ಓವರ್ ನಲ್ಲೇ ತಂಡಕ್ಕೆ ಜಯ ತಂದುಕೊಟ್ಟರು. ಪರಿಣಾಮವಾಗಿ ಸದರ್ನ್ ಸೂಪರ್ ಸ್ಟಾರ್ಸ್ ತಂಡವು ಈ ಪಂದ್ಯದಲ್ಲಿ 8 ವಿಕೆಟ್ ಗಳ ಭರ್ಜರಿ ಗೆಲುವು ದಾಖಲಿಸಿತು.
ಈ ಶತಕದೊಂದಿಗೆ ಮಾರ್ಟಿನ್ ಗಪ್ಟಿಲ್ (131) ಲೆಜೆಂಡ್ಸ್ ಲೀಗ್ ಕ್ರಿಕೆಟ್ ಟೂರ್ನಿಯಲ್ಲಿ ಅತ್ಯಧಿಕ ರನ್ ಗಳಿಸಿದ ಆಟಗಾರ ಎಂಬ ದಾಖಲೆ ಬರೆದಿದ್ದಾರೆ.