ಬೆಂಗಳೂರು: ಬೆಂಗಳೂರಿನಲ್ಲಿ ವಿವಾಹಿತ ಮಹಿಳೆ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಡೆದಿದೆ.
ಕೋಣನಕುಂಟೆ ಪೊಲೀಸ್ ಠಾಣಾ ವ್ಯಾಪ್ತಿಯ ನಿವಾಸದಲ್ಲಿ ವಿವಾಹಿತೆ ನೇಣಿಗೆ ಶರಣಾಗಿದ್ದಾರೆ. ಬ್ಯಾಂಕ್ ಮ್ಯಾನೇಜರ್ ಪತ್ನಿಯ ಮೃತದೇಹ ನೇಣುಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದು, ಸಾಕಷ್ಟು ಅನುಮಾನಗಳು ವ್ಯಕ್ತವಾಗುತ್ತಿವೆ. ಇಂದು ಮಧ್ಯಾಹ್ನ 2 ಗಂಟೆ ಸುಮಾರಿಗೆ ಆತ್ಮಹತ್ಯೆಗೆ ಶರಣಾಗಿರುವ ಸಾಧ್ಯತೆ ಇದೆ ಎನ್ನಲಾಗಿದೆ.
ವಿಶಾಲಾಕ್ಷಿ ಹಿರೇಮಠ ಸಾವನ್ನಪ್ಪಿದ ದುರ್ದೈವಿ. ಮೃತ ವಿಶಾಲಾಕ್ಷಿ ಹಿರೇಮಠ ಮದುವೆಯಾಗಿ 14 ವರ್ಷ ಕಳೆದಿದ್ದವು. 9 ವರ್ಷ ಹಾಗೂ 7 ವರ್ಷದ ಪುತ್ರಿಯರು ಹಾಗೂ 5 ವರ್ಷದ ಮಗ ಕೂಡ ಇದ್ದಾನೆ.
ಆತ್ಮಹತ್ಯೆಗೆ ಶರಣಾಗಿರುವ ಮಹಿಳೆಯ ಪತಿ ಶಂಭುಲಿಂಗಯ್ಯ ಎಚ್ ಡಿಎಫ್ ಸಿ ಬ್ಯಾಂಕ್ ಮ್ಯಾನೇಜರ್ ಆಗಿದ್ದಾರೆ. ಈ ದಂಪತಿ ಹಾವೇರಿ ಮೂಲದವರು ಎನ್ನಲಾಗಿದೆ. ಕಳೆದ 14 ವರ್ಷಗಳಿಂದ ಬೆಂಗಳೂರಿನಲ್ಲಿ ವಾಸಿಸುತ್ತಿದ್ದಾರೆ. ಮೂಲತಃ ಹಾವೇರಿ ಜಿಲ್ಲೆ ಹಾನಗಲ್ ತಾಲೂಕಿನ ಕುಂದುರು ನೀರಲಗಿ ಗ್ರಾಮದವರು ಎನ್ನಲಾಗಿದೆ. ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ. ಈ ಕುರಿತು ತನಿಖೆ ನಡೆಸುತ್ತಿದ್ದಾರೆ.