ಭೋಪಾಲ್: ಸಾಮಾಜಿಕ ಜಾಲತಾಣಗಳಲ್ಲಿ ಲೈಕ್ಸ್, ಶೇರ್‌ಗಳಿಗಾಗಿ ಯುವಕರು ಯಾವ ಹಂತಕ್ಕೆ ಬೇಕಾದರೂ ಇಳಿಯುತ್ತಾರೆ ಎನ್ನುವುದಕ್ಕೆ ಈ ಘಟನೆಯೇ ಸಾಕ್ಷಿ. ಮಧ್ಯಪ್ರದೇಶದ ಯೂಟ್ಯೂಬರ್ ಒಬ್ಬ, ‘ಬ್ಲ್ಯಾಕ್ ಕ್ಯಾಟ್’ ಕಮಾಂಡೋಗಳಂತಹ ಭದ್ರತೆಯೊಂದಿಗೆ ಪೆಟ್ರೋಲ್ ಬಂಕ್‌ಗೆ ಬಂದು, ತನ್ನ ಹೊಚ್ಚ ಹೊಸ ಮಹೀಂದ್ರಾ ಥಾರ್ (Mahindra Thar) ಮೇಲೆ ಪೆಟ್ರೋಲ್ ಸುರಿದು ವಿಕೃತಿ ಮೆರೆದ ಘಟನೆ ನಡೆದಿದೆ. ಈ ಅಪಾಯಕಾರಿ ಸ್ಟಂಟ್‌ನ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಸಾರ್ವಜನಿಕರಿಂದ ತೀವ್ರ ಆಕ್ರೋಶ ವ್ಯಕ್ತವಾಗಿದೆ.
ವಿಡಿಯೋದಲ್ಲಿ ಏನಿದೆ?
ಕೇವಲ 18 ಸೆಕೆಂಡ್‌ಗಳ ಈ ವಿಡಿಯೋದಲ್ಲಿ, ಪ್ರದೀಪ್ ಢಾಕಾ ಎಂದು ಗುರುತಿಸಲಾದ ಯುವಕ, ತನ್ನ ಸ್ನೇಹಿತ ಮತ್ತು ಅಂಗರಕ್ಷಕರೊಂದಿಗೆ ಥಾರ್ ಎಸ್‌ಯುವಿ ಬಳಿ ನಿಂತಿರುತ್ತಾನೆ. ಕಾರಿಗೆ ಪೆಟ್ರೋಲ್ ತುಂಬಿಸುವ ನೆಪದಲ್ಲಿ, ಏಕಾಏಕಿ ಪೆಟ್ರೋಲ್ ನಳಿಕೆಯನ್ನು ಕಾರಿನ ಹಿಂಬದಿ ಟೈರ್ ಮತ್ತು ಫ್ಯೂಲ್ ಕ್ಯಾಪ್ ಸುತ್ತಲೂ ಹಿಡಿದು ಪೆಟ್ರೋಲ್ ಚೆಲ್ಲುತ್ತಾನೆ. ಇಂಧನವು ನೆಲದ ಮೇಲೆಲ್ಲಾ ಹರಿಯುವುದನ್ನು ನೋಡಿದ ಆತನ ಸ್ನೇಹಿತ ತಕ್ಷಣವೇ ಮಧ್ಯಪ್ರವೇಶಿಸಿ, ನಳಿಕೆಯನ್ನು ಮತ್ತೆ ಕಾರಿನೊಳಗೆ ಹಾಕುತ್ತಾನೆ. ಇದೆಲ್ಲವನ್ನೂ ಚಿತ್ರೀಕರಿಸಿಕೊಂಡು, ಕೊನೆಗೆ ಕ್ಯಾಮರಾ ನೋಡಿ ಮುಗುಳ್ನಕ್ಕು ಯುವಕ ಪೋಸ್ ನೀಡಿದ್ದಾನೆ.
ನೆಟ್ಟಿಗರ ಆಕ್ರೋಶ
ಈ ವಿಡಿಯೋ ಎಕ್ಸ್ (ಟ್ವಿಟರ್) ಖಾತೆಯಲ್ಲಿ ಹಂಚಿಕೆಯಾದಾಗಿನಿಂದ, 3 ಲಕ್ಷಕ್ಕೂ ಹೆಚ್ಚು ವೀಕ್ಷಣೆಗಳನ್ನು ಪಡೆದಿದ್ದು, ನೂರಾರು ಜನರು ಕಾಮೆಂಟ್ ಮಾಡಿದ್ದಾರೆ. “ಹಣವಿದೆ, ಆದರೆ ಮೆದುಳಿಲ್ಲ,” ಎಂದು ಒಬ್ಬರು ಟೀಕಿಸಿದ್ದಾರೆ.
“ಥಾರ್ ಕಾರು ಈಗಾಗಲೇ ಕೆಟ್ಟ ಕಾರಣಗಳಿಗೆ ಸುದ್ದಿಯಲ್ಲಿದೆ. ಇಂತಹವರಿಂದ ಅದರ ಹೆಸರು ಇನ್ನಷ್ಟು ಹಾಳಾಗುತ್ತಿದೆ,” ಎಂದು ಮತ್ತೊಬ್ಬರು ಬೇಸರ ವ್ಯಕ್ತಪಡಿಸಿದ್ದಾರೆ. “ಇದು ಕಾರಿನ ಪೇಂಟ್‌ಗೆ ಹಾನಿ ಮಾಡುತ್ತದೆ ಎಂಬ ಅರಿವು ಅವರಿಗಿದೆಯೇ?” ಎಂದು ಕೆಲವರು ಪ್ರಶ್ನಿಸಿದ್ದಾರೆ.
ಗಂಭೀರ ಕಳವಳ ವ್ಯಕ್ತಪಡಿಸಿದ ಮತ್ತೊಬ್ಬ ಬಳಕೆದಾರ, “ಇವರು ಎನ್‌ಎಸ್‌ಜಿ ಕಮಾಂಡೋಗಳ ಸಮವಸ್ತ್ರವನ್ನು ಹೋಲುವ ಬಟ್ಟೆ ಧರಿಸಿದ್ದಾರೆ. ಪೆಟ್ರೋಲ್ ಬಂಕ್‌ನಲ್ಲಿರುವ ಎಲ್ಲರ ಜೀವದ ಜೊತೆ ಚೆಲ್ಲಾಟವಾಡುತ್ತಿರುವ ಇಂತಹ ದುಷ್ಕರ್ಮಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು,” ಎಂದು ಆಗ್ರಹಿಸಿದ್ದಾರೆ.
ಇಂತಹ ಅಪಾಯಕಾರಿ ಹುಚ್ಚಾಟಗಳು ಕೇವಲ ಇಂಧನವನ್ನು ಪೋಲು ಮಾಡುವುದಲ್ಲದೆ, ಪೆಟ್ರೋಲ್ ಬಂಕ್‌ನಲ್ಲಿದ್ದ ಪ್ರತಿಯೊಬ್ಬರ ಜೀವಕ್ಕೂ ಅಪಾಯವನ್ನುಂಟುಮಾಡುತ್ತವೆ ಎಂದು ಹಲವರು ಆಕ್ರೋಶ ವ್ಯಕ್ತಪಡಿಸಿದ್ದು, ಯೂಟ್ಯೂಬರ್ ವಿರುದ್ಧ ಕಠಿಣ ಕ್ರಮಕ್ಕೆ ಒತ್ತಾಯಿಸಿದ್ದಾರೆ.
ಇದನ್ನೂ ಓದಿ: ಭಾರತ, ಆಫ್ಘನ್ ಜತೆ ಎರಡು ರಂಗಗಳ ಯುದ್ಧಕ್ಕೆ ಸಿದ್ಧ : ಪಾಕ್ ರಕ್ಷಣಾ ಸಚಿವರ ಉದ್ಧಟತನದ ಹೇಳಿಕೆ!



















