ನರ್ಸಿಂಗ್‌ಪುರ್: ಮಧ್ಯಪ್ರದೇಶದ ನರ್ಸಿಂಗ್‌ಪುರ್ ಜಿಲ್ಲಾ ಸರ್ಕಾರಿ ಆಸ್ಪತ್ರೆಯಲ್ಲಿ 12ನೇ ತರಗತಿಯ ವಿದ್ಯಾರ್ಥಿನಿ, 19 ವರ್ಷದ ಸಂಧ್ಯಾ ಚೌಧರಿಯನ್ನು ಆಕೆಯ ಪ್ರಿಯಕರ ಸಾರ್ವಜನಿಕರ ಸಮ್ಮುಖದಲ್ಲೇ ಭೀಕರವಾಗಿ ಹತ್ಯೆ ಮಾಡಿದ್ದಾನೆ. ಈ ಆಘಾತಕಾರಿ ಘಟನೆ ಆಸ್ಪತ್ರೆಗಳ ಭದ್ರತಾ ವ್ಯವಸ್ಥೆ ಮತ್ತು ಸಾರ್ವಜನಿಕ ಸುರಕ್ಷತೆಯ ಬಗ್ಗೆ ಗಂಭೀರ ಪ್ರಶ್ನೆಗಳನ್ನು ಹುಟ್ಟುಹಾಕಿದೆ. ಅಚ್ಚರಿಯೆಂದರೆ ಈ ಬರ್ಬರ ಕೊಲೆಯನ್ನು ವೈದ್ಯರೇ ವಿಡಿಯೋ ಮಾಡಿದ್ದು, ಹತ್ಯೆಯ ವಿಡಿಯೋ ಸಾಮಾಜಿಕ ಮಾಧ್ಯಮಗಳಲ್ಲಿ ವ್ಯಾಪಕವಾಗಿ ಹರಿದಾಡುತ್ತಿದ್ದು, ನೋಡಿದವರನ್ನು ಬೆಚ್ಚಿ ಬೀಳಿಸುತ್ತಿದೆ.
ಆಸ್ಪತ್ರೆಯಲ್ಲೇ ನಡೆದ ಕ್ರೌರ್ಯ
ಜೂನ್ 27ರಂದು ಸಂಧ್ಯಾ ಚೌಧರಿ ಆಸ್ಪತ್ರೆಯಲ್ಲಿ ವೃತ್ತಿಪರ ತರಬೇತಿಯಲ್ಲಿದ್ದಾಗ, ಆಕೆಯ ಮೇಲಿನ ವ್ಯಾಮೋಹದಿಂದ ಅಭಿಷೇಕ್ ಕೋಷ್ಟಿ ಎಂಬಾತ ತುರ್ತು ಘಟಕದ ಬಳಿ ಆಕೆಯ ಮೇಲೆ ದಾಳಿ ನಡೆಸಿದ್ದಾನೆ. ಜೂನ್ 30ರಂದು ಹೊರಬಿದ್ದ ಭಯಾನಕ ವಿಡಿಯೋದಲ್ಲಿ, ಅಭಿಷೇಕ್ ಹುಡುಗಿಯ ಕುತ್ತಿಗೆಯನ್ನು ಸೀಳುತ್ತಿರುವುದು ಸ್ಪಷ್ಟವಾಗಿ ಸೆರೆಯಾಗಿದೆ.
ಆತಂಕಕಾರಿ ವಿಷಯವೆಂದರೆ, ವೈದ್ಯರು, ನರ್ಸ್‌ಗಳು ಮತ್ತು ವಾರ್ಡ್ ಬಾಯ್‌ಗಳು ಸೇರಿದಂತೆ ಆಸ್ಪತ್ರೆಯ ಸಿಬ್ಬಂದಿ ಹಾಗೂ ಸಾರ್ವಜನಿಕರು ಈ ದೃಶ್ಯವನ್ನು ನೋಡುತ್ತಿದ್ದರೂ, ಯಾರೊಬ್ಬರೂ ಮಧ್ಯಪ್ರವೇಶಿಸಿ ತಡೆಯಲು ಪ್ರಯತ್ನಿಸಿಲ್ಲ. ಕೆಲವರು ಹುಡುಗಿ ರಕ್ತದ ಮಡುವಿನಲ್ಲಿ ಬಿದ್ದಿದ್ದರೂ ತಮಗೇನೂ ಗೊತ್ತೇ ಇಲ್ಲ ಎಂಬಂತೆ ಅನೇಕರು ಸುಮ್ಮನೆ ಹಾದು ಹೋಗುತ್ತಿರುವುದೂ ಕಾಣಿಸುತ್ತದೆ.
ಮೊಬೈಲ್ ಕ್ಯಾಮೆರಾದಲ್ಲಿ ಸೆರೆಹಿಡಿಯಲಾದ ದೃಶ್ಯದಲ್ಲಿ, ಕಪ್ಪು ಶರ್ಟ್ ಧರಿಸಿದ್ದ ಅಭಿಷೇಕ್ ಸಂಧ್ಯಾಳಿಗೆ ಕಪಾಳಮೋಕ್ಷ ಮಾಡಿ, ನೆಲಕ್ಕೆ ಕೆಡವಿ, ಆಕೆಯ ಎದೆ ಮೇಲೆ ಕುಳಿತು ಚಾಕುವಿನಿಂದ ಕುತ್ತಿಗೆ ಸೀಳಿದ್ದಾನೆ. ಈ ಘಟನೆಯು ಹಾಡಹಗಲೇ ತುರ್ತು ಚಿಕಿತ್ಸಾ ವಿಭಾಗದೊಳಗೆ, ವೈದ್ಯರು ಮತ್ತು ಭದ್ರತಾ ಸಿಬ್ಬಂದಿಯ ಕಣ್ಣ ಮುಂದೆಯೇ ಸುಮಾರು 10 ನಿಮಿಷಗಳ ಕಾಲ ನಡೆದಿದೆ. ದಾಳಿಯ ನಂತರ, ಅಭಿಷೇಕ್ ತನ್ನ ಕುತ್ತಿಗೆಯನ್ನು ಸೀಳಿಕೊಳ್ಳಲು ಯತ್ನಿಸಿ ವಿಫಲನಾಗಿ, ಆಸ್ಪತ್ರೆಯಿಂದ ಪರಾರಿಯಾಗಿ, ಹೊರಗೆ ನಿಲ್ಲಿಸಿದ್ದ ಬೈಕ್ ಏರಿ ಕಣ್ಮರೆಯಾಗಿದ್ದಾನೆ.
ಭದ್ರತಾ ವ್ಯವಸ್ಥೆಯ ಸಂಪೂರ್ಣ ಕುಸಿತ
ಕೊಲೆ ನಡೆದ ಸಮಯದಲ್ಲಿ ಟ್ರಾಮಾ ಸೆಂಟರ್ ಹೊರಗೆ ಇಬ್ಬರು ಭದ್ರತಾ ಸಿಬ್ಬಂದಿ ಕರ್ತವ್ಯದಲ್ಲಿದ್ದರು. ಒಳಗಡೆ ಹಲವು ಆಸ್ಪತ್ರೆ ಸಿಬ್ಬಂದಿ, ವೈದ್ಯರು, ನರ್ಸ್‌ಗಳು ಮತ್ತು ವಾರ್ಡ್ ಬಾಯ್‌ಗಳು ಇದ್ದರು. ಆದರೂ ಯಾರೊಬ್ಬರೂ ದಾಳಿಕೋರನನ್ನು ತಡೆಯಲು ಮುಂದಾಗದಿರುವುದು ಭದ್ರತಾ ವ್ಯವಸ್ಥೆಯ ಸಂಪೂರ್ಣ ವೈಫಲ್ಯವನ್ನು ಎತ್ತಿ ತೋರಿಸುತ್ತದೆ. ಈ ಘಟನೆಯು ರೋಗಿಗಳು ಮತ್ತು ಅವರ ಕುಟುಂಬಗಳಲ್ಲಿ ತೀವ್ರ ಭಯವನ್ನು ಉಂಟುಮಾಡಿದೆ. ಟ್ರಾಮಾ ವಾರ್ಡ್‌ನಲ್ಲಿ ದಾಖಲಾಗಿದ್ದ 11 ರೋಗಿಗಳಲ್ಲಿ ಎಂಟು ಮಂದಿ ಅಂದೇ ಬಿಡುಗಡೆಗೊಂಡರೆ, ಉಳಿದವರು ಮರುದಿನ ಬೆಳಿಗ್ಗೆ ಆಸ್ಪತ್ರೆ ತೊರೆದಿದ್ದಾರೆ.