ಬೆಂಗಳೂರು : ಐಷಾರಾಮಿ ಕಾರುಗಳ ಗ್ಲಾಸ್ ಒಡೆದು ಕಳ್ಳತನ ಮಾಡ್ತಿದ್ದ ತಮಿಳುನಾಡಿನ ಕುಖ್ಯಾತ ರಾಮ್ಜೀ ಗ್ಯಾಂಗ್ ಲೀಡರ್ನನ್ನ ವಿಜಯನಗರ ಪೊಲೀಸರು ಬಂಧಿಸಿದ್ದಾರೆ. ಜೈ ಶೀಲನ್ ಬಂಧಿತ ರಾಮ್ಜೀ ಗ್ಯಾಂಗ್ ಲೀಡರ್.

ಜೈ ಶೀಲನ್, 19 ವರ್ಷದ ಮಗ ದೀನದಯಾಳ್ ಜೊತೆ ಸೇರಿಕೊಂಡು ಕರ್ನಾಟಕದ ಹಲವು ಜಿಲ್ಲೆಗಳಲ್ಲಿ ತಮ್ಮ ಕೈಚಳಕ ತೋರಿಸುತ್ತಿದ್ದರು. ಹಲವು ವರ್ಷಗಳಿಂದ ರಾಜ್ಯದ ಹಲವು ಜಿಲ್ಲೆಯ ಪೊಲೀಸರಿಗೆ ಈ ಅಪ್ಪ, ಮಗನ ರಾಮ್ಜೀ ಗ್ಯಾಂಗ್ ತಲೆನೋವಾಗಿತ್ತು. ಪೊಲೀಸರು ತಮಿಳುನಾಡಿಗೆ ಆರೋಪಿಗಳನ್ನ ಬಂಧನ ಮಾಡಲು ಹೋದಾಗ ಮಗ ದಿನ್ ದಯಾಳ್ ತಪ್ಪಿಸಿಕೊಂಡು ಹೋಗಿದ್ದು, ಅಪ್ಪ ಜೈ ಶೀಲನ್ನನ್ನ ಬಂಧನ ಮಾಡಿ ಕರೆತಂದಿದ್ದಾರೆ.
ಆರೋಪಿಗಳು ತಮಿಳುನಾಡಿನಿಂದ ಮೂರು ತಿಂಗಳಿಗೊಮ್ಮೆ ಬೆಂಗಳೂರಿಗೆ ಬಂದು ಕಾರುಗಳ ಗ್ಲಾಸ್ಗಳನ್ನ ಒಡೆದು ಬೆಲೆ ಬಾಳುವ ವಸ್ತುಗಳನ್ನ ಕಳ್ಳತನ ಮಾಡಿಕೊಂಡು ಹೋಗ್ತಾ ಇದ್ದರು. ಒಮ್ಮೆ ಬಂದರೆ ನಾಲ್ಕು ಐದು ಕಡೆ ಕೈಚಳಕ ತೋರಿಸಿ ಎಸ್ಕೇಪ್ ಆಗುತ್ತಿದ್ದರು.
ಕರ್ನಾಟಕದಲ್ಲಿ ಬೆಳಗಾವಿಯಿಂದ ಬೆಂಗಳೂರಿನವರೆಗೂ ಬಿಎಂಡಬ್ಲೂನಂತಹ ಐಷಾರಾಮಿ ಕಾರುಗಳ ಗ್ಲಾಸ್ಗಳನ್ನ ಒಡೆದು, ಬೆಲೆಬಾಳುವ ವಸ್ತುಗಳನ್ನ ದೋಚಿಕೊಂಡು ಹೋಗುತ್ತಿದ್ದರು. ಈ ಗ್ಯಾಂಗ್, ಬೆಳಗಾವಿ, ಬೆಂಗಳೂರಿನ ವಿಜಯನಗರ, ಜಯನಗರ, ಮೆಜೆಸ್ಟಿಕ್ ರೈಲ್ವೆ ನಿಲ್ದಾಣ ಸೇರಿ ಹಲವು ಕಡೆ ಕೈಚಳ ತೋರಿರೋದು ಪೊಲೀಸರ ತನಿಖೆಯ ವೇಳೆ ಬಯಲಿಗೆ ಬಂದಿದೆ. ಇದೀಗ ಪೊಲೀಸರು ಆರೋಪಿ ಮಗ ದಿನ್ ದಯಾಳ್ನ ಬಂಧನಕ್ಕೆ ಬಲೆ ಬೀಸಿದ್ದಾರೆ.