ಹಾಸನ: ಮಾಜಿ ಸಂಸದ ಪ್ರಜ್ವಲ್ ರೇವಣ್ಣ (Prajwal Revanna) ನಂತರ ಈಗ ವಿಧಾನಪರಿಷತ್ ಸದಸ್ಯ ಡಾ. ಸೂರಜ್ ರೇವಣ್ಣ (Suraj Revanna) ವಿರುದ್ಧವೂ ಲೈಂಗಿಕ ದೌರ್ಜನ್ಯ (sexual assault ) ಆರೋಪ ಕೇಳಿ ಬಂದಿದೆ.
ಸೂರಜ್ ರೇವಣ್ಣ, ತಮ್ಮ ಪಕ್ಷದ ಕಾರ್ಯಕರ್ತನ ಮೇಲೆ ಅಸಹಜ ಲೈಂಗಿಕ ದೌರ್ಜನ್ಯ ಎಸಗಿದ್ದಾರೆ ಎಂದು ಆರೋಪಿಸಲಾಗಿದೆ. ಈ ವಿಲಕ್ಷಣ ಆರೋಪದಿಂದ ರೇವಣ್ಣ ಕುಟುಂಬ ಮತ್ತೆ ಮುಜುಗರಕ್ಕೀಡಾಗುವಂತಾಗಿದೆ.
ಸೂರಜ್ ರೇವಣ್ಣ ಅವರು ಜೂನ್ 16ರ ರಾತ್ರಿ ತಮ್ಮ ಪಕ್ಷದ ಕಾರ್ಯಕರ್ತನನ್ನು ಸಹಾಯ ಮಾಡುವುದಾಗಿ ಚನ್ನಪಟ್ಟಣ ತಾಲ್ಲೂಕಿನ ಗನ್ನಿಕಡದ ತೋಟದ ಮನೆಗೆ ಕರೆಯಿಸಿಕೊಂಡು ಬಲವಂತವಾಗಿ ಲೈಂಗಿಕ ದೌರ್ಜನ್ಯ ನಡೆಸಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ.
ಬಲವಂತವಾಗಿ ತನ್ನ ಮೇಲೆ ದೌರ್ಜನ್ಯ ನಡೆಸಿರುವ ಕುರಿತು ಜೆಡಿಎಸ್ ಕಾರ್ಯಕರ್ತ, ಸಿಎಂ, ಗೃಹ ಸಚಿವರು, ಡಿಜಿ ಮತ್ತು ಐಜಿಪಿ, ಹಾಸನ ಎಸ್ಪಿಗೆ ದೂರು ನೀಡಿದ್ದಾರೆ ಎನ್ನಲಾಗಿದೆ. ಈಗಾಗಲೇ ಪ್ರಜ್ವಲ್ ರೇವಣ್ಣ ಅತ್ಯಾಚಾರ ಪ್ರಕರಣದಲ್ಲಿ ಎಸ್ ಐಟಿ ವಶದಲ್ಲಿರುವಾಗಲೇ ಅಣ್ಣ ಸೂರಜ್ ವಿರುದ್ಧ ಯುವಕನ ಮೇಲೆ ಅಸಹಜ ಲೈಂಗಿಕ ದೌರ್ಜನ್ಯ ಎಸಗಿರುವ ಆರೋಪ ಕೇಳಿ ಬಂದಿದೆ. ಪ್ರಜ್ವಲ್ ರೇವಣ್ಣ ಪ್ರಕರಣದಿಂದ ರೇವಣ್ಣ, ದೇವೇಗೌಡರ ಕುಟುಂಬ ಮುಜುಗರ ಅನುಭವಿಸಿದೆ. ಇದರ ಮಧ್ಯೆ ಈ ಪ್ರಕರಣ ಮತ್ತಷ್ಟು ಆತಂಕ ಮೂಡಿಸುವಂತಾಗಿದೆ.