ಬೆಳಗಾವಿ: ಮುಡಾ ಹಗರಣ ಸೇರಿದಂತೆ ಕೆಲವು ಹಗರಣಗಳನ್ನು ಮುಂದಿಟ್ಟುಕೊಂಡು ಸಿಎಂ ಸಿದ್ದರಾಮಯ್ಯ ಅವರ ರಾಜೀನಾಮೆಗೆ ವಿಪಕ್ಷಗಳು ಆಗ್ರಹಿಸುತ್ತಿವೆ. ಈ ಮಧ್ಯೆ ಕಾಂಗ್ರೆಸ್ ನಲ್ಲಿಯೇ ಸಿಎಂ ಸ್ಥಾನಕ್ಕಾಗಿ ಪೈಪೋಟಿ ನಡೆದಿವೆ.
ಈ ಎಲ್ಲ ಬೆಳವಣಿಗೆಯ ಮಧ್ಯೆ ಕೋಡಿಮಠದ ಶ್ರೀಗಳ ಹೇಳಿಕೆ ಕೂಡ ವೈರಲ್ ಆಗಿತ್ತು. ಈ ವಿಚಾರವಾಗಿ ಪ್ರತಿಕ್ರಿಯಿಸಿರುವ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಕೋಡಿಮಠದ ಶ್ರೀಗಳ ಹೇಳಿಕೆ ಕುರಿತು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾನು ಪಕ್ಷದ ಶಿಸ್ತಿನ ಸಿಪಾಯಿ. ಪಕ್ಷದಲ್ಲಿ ಹೈಕಮಾಂಡ್, ಶಾಸಕಾಂಗ ಅಂತ ಇದೆ. ಮುಡಾ ಹಗರಣದ ಕುರಿತು ಸುಳ್ಳು ದಾಖಲೆ ಕೊಟ್ಟು ಬಿಜೆಪಿಯವರು ಏನೋ ಮಾಡುತ್ತಿದ್ದಾರೆ. ಇಂತಹ ಸಂಧರ್ಭದಲ್ಲಿ ನಾವೆಲ್ಲ ಸಿದ್ದರಾಮಯ್ಯ ಬೆನ್ನಿಗೆ ಗಟ್ಟಿಯಾಗಿ ನಿಲ್ಲಬೇಕಿದೆ. ಈ ವಿಷಯ ಬಾಲಿಷ ಅನಿಸುತ್ತದೆ. ಈ ವಿಷಯವಾಗಿ ಚರ್ಚೆ ಯೋಗ್ಯವಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಇಂತಹ ವಿಚಾರವನ್ನು ಅಲ್ಲಿ, ಇಲ್ಲಿ ಗಲ್ಲಿಯಲ್ಲಿ ಮಾತನಾಡುವ ವಿಚಾರ ಅಲ್ಲ. ಧೀಮಂತ ನಾಯಕತ್ವ ನಮ್ಮ ಪಕ್ಷಕ್ಕೆ ಇದೆ. ಸಿಎಂ ಸಿದ್ದರಾಮಯ್ಯ ಜೊತೆಗೆ ಗಟ್ಟಿಯಾಗಿ ಇರುತ್ತಾರೆ. ಸಿದ್ದರಾಮಯ್ಯ ಎಲ್ಲಿಯವರೆಗೆ ಗಟ್ಟಿಯಾಗಿ ಇರುತ್ತಾರೆ ಅಲ್ಲಿಯವರೆಗೆ ಅವರೇ ಸಿಎಂ. ಅಲ್ಲಿ ಇಲ್ಲಿ ಗಲ್ಲಿ, ಹಾದಿ ಬೀದಿಯಲ್ಲಿ ಮಾತನಾಡುವ ವಿಷಯ ಅಲ್ಲ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.ಇತ್ತೀಚೆಗಷ್ಟೇ ಕೋಡಿಮಠದ ಶ್ರೀ, ಮುಂದಿನ ಸಿಎಂ ಮಹಿಳೆ ಆಗುತ್ತಾರೆ ಎಂದು ಭವಿಷ್ಯ ನುಡಿದಿದ್ದರು.