ಕರ್ನಾಟಕ ಕಾಂಗ್ರೆಸ್ ಅಧ್ಯಕ್ಷರ ಕುರ್ಚಿಗೆ ಹೊಸಬರ ನೇಮಕ ಬಹುತೇಕ ಅಂತಿಮವಾಗಿದೆ. ಅಳೆದು ತೂಗಿ ಕಾಂಗ್ರೆಸ್ ಹೈಕಮಾಂಡ್ ಪಕ್ಷದ ಚುಕ್ಕಾಣಿಯನ್ನು ಹೊಸಬರಿಗೆ ಹಸ್ತಾಂತರಿಸುವ ಕಾಲ ಸನ್ನಿಹಿತವಾಗಿದೆ.
ಹೌದು! ಹೈಕಮಾಂಡ್ ಬುಲಾವ್ ಬೆನ್ನಲ್ಲಿ ನಿನ್ನೆಯೇ ದೆಹಲಿ ತಲುಪಿದ್ದ ಡಿ.ಕೆ. ಶಿವಕುಮಾರ್ ಇವತ್ತು ರಾಹುಲ್ ಗಾಂಧಿ ಜೊತೆ ವಿಸ್ತೃತ ಮಾತುಕತೆ ನಡೆಸಿದ್ದಾರೆ. ಈ ವೇಳೆ, ರಾಹುಲ್ ಪಕ್ಷದಲ್ಲಿ ಒಬ್ಬರಿಗೆ ಒಂದೇ ಹುದ್ದೆ ದಾಳ ಉರುಳಿಸಿದ್ದಾರೆ. ಹೀಗಾಗಿ ಒಲ್ಲದ ಮನಸ್ಸಿನಿಂದಲೇ ಡಿಕೆ ತಮ್ಮ ಕುರ್ಚಿಯನ್ನೀಗ ಬಿಟ್ಟುಕೊಡೋ ಒತ್ತಡಕ್ಕೆ ಸಿಲುಕಿದ್ದಾರೆ.
ಒಂದು ಕುರ್ಚಿ ಕಾಂಗ್ರೆಸ್ ನಲ್ಲಿ ಹತ್ತಾರು ಆಕಾಂಕ್ಷಿಗಳು
ಡಿ ಕೆ ಶಿವಕುಮಾರ್ ಈ ಹಿಂದೆಯೇ ಪಕ್ಷದ ಅಧ್ಯಕ್ಷಗಿರಿ ತ್ಯಜಿಸಬೇಕಿತ್ತು. ಹಾಗೆ ನೋಡಿದರೆ ವಿಧಾನಸಭೆಯಲ್ಲಿ ಅಮೋಘ ಗೆಲುವಿನ ಬಳಿಕವೇ ಬೇರೊಬ್ಬರಿಗೆ ಅಧಿಕಾರ ಹಸ್ತಾಂತರಿಸಬೇಕಿತ್ತು. ಆದರೆ ಅವತ್ತು ಸಿಎಂ ಕುರ್ಚಿಗೆ ಪಟ್ಟು ಹಿಡಿದಿದ್ದ ಡಿಕೆಶಿಯನ್ನು ಸಮಾಧಾನ ಪಡಿಸಲೆಂದೇ ಹೈಕಮಾಂಡ್ ಪಕ್ಷದ ಅಧ್ಯಕ್ಷ ಹುದ್ದೆ ಮತ್ತು ಡಿಸಿಎಂ ಗಿರಿ ಎರಡನ್ನೂ ದಯಪಾಲಿಸಿ ಪರಿಸ್ಥಿತಿ ತಿಳಿಗೊಳಿಸಿತ್ತು.
ಆದರೀಗ ಕಾಲ ಬದಲಾಗಿದೆ. ಪಕ್ಷದ ವರ್ಚಸ್ಸು ವೃದ್ಧಿಗೆ ಹೊಸಬರಿಗೆ ಮಣೆ ಹಾಕುವ ಅನಿವಾರ್ಯತೆ ಹೈಕಮಾಂಡ್ ಗೂ ಇದೆ. ಹೀಗಾಗಿ ದೆಹಲಿಗೆ ಕರೆಸಿಕೊಂಡಿರುವ ವರಿಷ್ಠರು, ಡಿಕೆಶಿಗೆ ಅಧಿಕಾರ ತ್ಯಜಿಸುವಂತೆ ಕಟ್ಟಪ್ಪಣೆ ಮಾಡಿದ್ದಾರೆ ಎನ್ನಲಾಗುತ್ತಿದೆ. ಇದರ ನಡುವೆ ಇರುವ ಒಂದು ಕುರ್ಚಿಗೆ ಪಕ್ಷದಲ್ಲಿ ಹತ್ತಾರು ಹಿರಿಯರು ಲಾಬಿ ಶುರುಮಾಡಿದ್ದಾರೆ.
ಸತೀಶ್ ಜಾರಕಿಹೊಳಿ-ಈಶ್ವರ್ ಖಂಡ್ರೆ ನಡುವೆ ಫೈಟ್
ಬಣ ಬಡಿದಾಟದಲ್ಲಿ ಯಾರಿಗೆ ಹೈಕಮಾಂಡ್ ಬಂಪರ್
ಕೆಪಿಸಿಸಿ ಕುರ್ಚಿ ಈಗ ಕಾಂಗ್ರೆಸ್ ನಲ್ಲಿ ಹಾಟ್ ಫೇವರೀಟ್ ಆಗಿದೆ. ಡಿ ಕೆ ಬಳಿಕ ಯಾರಾಗ್ತಾರೆ ಸಾರಥಿ? ಅನ್ನೋದು ಖುದ್ದು ಕಾಂಗ್ರೆಸ್ಸಿಗರಲ್ಲೇ ಕುತೂಹಲ ಹೆಚ್ಚಿಸಿದೆ. ಇದರ ನಡುವೆ, ಪಕ್ಷದ ಹಿರಿಯ ಮುಖಂಡ ಸತೀಶ್ ಜಾರಕಿಹೊಳಿ ಟವೆಲ್ ಹಾಕಿ ಕುಳಿತಿದ್ದಾರೆ. ಸಿಎಂ-ಡಿಸಿಎಂ ಜೊತೆಯೇ ದೆಹಲಿಗೆ ಬಂದಿಳಿದಿರುವ ಸತೀಶ್ ನನಗೊಂದು ಅವಕಾಶ ಕೊಡಿ ಅಂತಾ ಖರ್ಗೆ ಮುಂದೆ ಮನವಿ ಮಾಡಿದ್ದಾರೆ.
ಪ್ರಬಲ ವಾಲ್ಮೀಕಿ ಸಮುದಾಯದ ಮುಖಂಡರಾಗಿರುವ ಜಾರಕಿಹೊಳಿ, ಬೆಳಗಾವಿ ಸೇರಿದಂತೆ ಉತ್ತರ ಕರ್ನಾಟಕದ ಪ್ರಭಾವಿಯಾಗಿದ್ದಾರೆ. ಹೀಗಾಗಿ ಜಾರಕಿಹೊಳಿ, ಕುರ್ಚಿಗೀಗ ಟವಲ್ ಹಾಕಿ ಕುಳಿತಿದ್ದಾರೆ. ಇತ್ತ ಈ ಬಾರಿ ಕೆಪಿಸಿಸಿ ಗಾದಿ ಲಿಂಗಾಯತರಿಗೆ ನೀಡಬೇಕು ಅನ್ನೋ ದೊಡ್ಡ ಕೂಗಿದೆ. ಈ ಕೋಟಾದಲ್ಲಿ ಹಿರಿಯ ನಾಯಕ ಈಶ್ವರ್ ಖಂಡ್ರೆ, ನಾನೂ ಆಕಾಂಕ್ಷಿ ಅಂತಿದ್ದಾರೆ. ಇದರ ನಡುವೆ ತುಮಕೂರಿನ ನಾಯಕ, ಹಾಲಿ ಸಚಿವ ಕೆ ಎನ್ ರಾಜಣ್ಣ ಕೂಡಾ ಕೆಪಿಸಿಸಿ ಗಾದಿ ಮೇಲೆ ಕಣ್ಣಿಟ್ಟು ಕುಳಿತಿದ್ದಾರೆ.
ಡಿಕೆ ಶಿವಕುಮಾರ್ ಚೆಕ್ ಮೇಟ್ ಇಟ್ರೆ ಗೇಮ್ ಚೇಂಜ್
ಕೆಪಿಸಿಸಿ ಅಧ್ಯಕ್ಷ ಗಾದಿಗೆ ಕೇಳಿ ಬರ್ತಿರೋ ಎರಡೂ ಹೆಸರುಗಳೂ ಸಿದ್ದರಮಯ್ಯ ಬಣದ ನಾಯಕರದ್ದು. ಹಾಗೆ ನೋಡಿದರೆ ಸತೀಶ್-ಡಿಕೆ ನಡುವೆ ಮೊದಲಿಂದಲೂ ಬೆಳಗಾವಿ ವಿಚಾರದಲ್ಲಿ ಶೀತಲ ಸಮರವಿದೆ. ಇತ್ತ ಖಂಡ್ರೆ ವಿಚಾರದಲ್ಲೂ ಡಿಕೆಗೆ ದೊಡ್ಡ ಒಲವೇನಿಲ್ಲ. ಹೀಗಾಗಿ, ಈ ಇಬ್ಬರ ಬದಲಿಗೆ ತಮ್ಮ ಬಣದ ನಿಷ್ಠನಿಗೆ ಪಟ್ಟ ಕಟ್ಟಬೇಕು ಅಂತಾ ಡಿಕೆ ಹಠ ಹಿಡಿದ್ರೆ ಅಧ್ಯಕ್ಷಗಿರಿ ರೇಸ್ ಭರ್ಜರಿ ರಂಗು ಪಡೆಯಲಿದೆ.
ಆದ್ರೆ, ಮೇಲ್ನೋಟಕ್ಕೆ ಮೊನ್ನೆಯ ಆರ್ ಸಿಬಿ ವಿಜಯೋತ್ಸವದುದ್ದಕ್ಕೂ ಮಿಂಚಿರೋ ಡಿಕೆಶಿ ಅವಘಡದ ನಂತ್ರ ಹೈಕಮಾಂಡ್ ನ ರೆಡ್ ರೆಡಾರ್ ನಲ್ಲಿದ್ದಾರೆ. ಇಂಥಾ ಸಂದರ್ಭದಲ್ಲಿ ಪಟ್ಟು ಹಿಡಿಯೋ ಬದಲು, ಸುಮ್ಮನಿದ್ದು, ಅವಕಾಶಕ್ಕಾಗಿ ಕಾದು ಪ್ರತಿ ತಂತ್ರ ರೂಪಿಸೋ ಉಮೇದು ಕೂಡಾ ಇದೆ ಎನ್ನಲಾಗ್ತಿದೆ. ಇದೀಗ ಸಮಯ ಪಕ್ವವಾಗಿದ್ದು, ಹೈಕಮಾಂಡ್ ಯಾರಿಗೆ ಪಟ್ಟಾಭಿಷೇಕ ಮಾಡುತ್ತೆ ಅನ್ನೋದು ಈಗಿರುವ ಪ್ರಶ್ನೆ.