ಬೆಂಗಳೂರು: ಕರ್ನಾಟಕ ವಿದ್ಯುತ್ ನಿಗಮ ನಿಯಮಿತದಲ್ಲಿ ಕಾನೂನು ಸೇವೆಗಳ ಮುಖ್ಯಸ್ಥರ ಒಂದು ಹುದ್ದೆ ಖಾಲಿ ಇದ್ದು, ನೇಮಕಾತಿಗಾಗಿ ಅಧಿಸೂಚನೆ ಹೊರಡಿಸಲಾಗಿದೆ. ಗುತ್ತಿಗೆ ಆಧಾರದ ಮೇಲೆ ನೇಮಕ ಮಾಡಿಕೊಳ್ಳಲಾಗುತ್ತಿದ್ದು, ಮಾಸಿಕ 75 ಸಾವಿರ ರೂ. ಸಂಬಳ ನೀಡಲಾಗುತ್ತದೆ. ಮೊದಲಿಗೆ ಒಂದು ವರ್ಷದ ಅವಧಿಗೆ ನೇಮಕ ಮಾಡಿಕೊಳ್ಳಲಾಗುತ್ತದೆ. ಕಾರ್ಯಕ್ಷಮತೆ ಆಧಾರದ ಮೇಲೆ ಅವಧಿಯನ್ನು ವಿಸ್ತರಿಸಲಾಗುತ್ತದೆ.
ಕೆಪಿಸಿಎಲ್ ಕರ್ನಾಟಕ ಸರ್ಕಾರದ ಒಂದು ಉದ್ದಿಮೆಯಾಗಿದ್ದು, ವಿದ್ಯುತ್ ಉತ್ಪಾದನೆಯಲ್ಲಿ ತೊಡಗಿದೆ. ನಿಗಮದ ಕಾನೂನು ವ್ಯವಹಾರಗಳಿಗೆ ಸಂಬಂಧಿಸಿದಂತೆ ವಿವಿಧ ನ್ಯಾಯಾಲಯಗಳಲ್ಲಿನ ಕಾನೂನು ವಿಷಯಗಳಲ್ಲಿ ತೆಗೆದುಕೊಳ್ಳಬೇಕಾದ ಕ್ರಮದ ಬಗ್ಗೆ ಸಲಹೆ ನೀಡುವುದು. ನ್ಯಾಯಾಲಯಗಳಲ್ಲಿ ನಿಗಮದ ಪರವಾಗಿ ವ್ಯವಹರಿಸುವ ನಿಗಮದ ವಕೀಲರೊಂದಿಗೆ ಸಂಪರ್ಕಿಸಲು ಮತ್ತು ಇತರೆ ಕಾನೂನು ವಿಷಯಗಳಿಗೆ ಸಂಬಂಧಿಸಿದ ಕಾರ್ಯಗಳನ್ನು ನಿರ್ವಹಿಸಲು ಗುತ್ತಿಗೆ ಆಧಾರದ ಮೇಲೆ ಒಂದು ವರ್ಷದ ಅವಧಿಗೆ ಮುಖ್ಯಸ್ಥರು(ಕಾನೂನು ಸೇವೆಗಳು) ಹುದ್ದೆಗೆ ಆನ್ ಲೈನ್ ಮೂಲಕ ಅರ್ಜಿ ಆಹ್ವಾನಿಸಲಾಗಿದೆ.
ಅರ್ಜಿ ಸಲ್ಲಿಸುವುದು ಹೇಗೆ?
ಅಭ್ಯರ್ಥಿಗಳು https://kpel.karnataka.gov.in ವೆಬ್ ಸೈಟ್ ಗೆ ಭೇಟಿ ನೀಡಬೇಕು. ಲಭ್ಯವಿರುವ ಅರ್ಜಿಯನ್ನು ಭರ್ತಿ ಮಾಡಿ, ವಿದ್ಯಾರ್ಹತೆ/ಅನುಭವಕ್ಕೆ ಸಂಬಂಧಪಟ್ಟ ದಾಖಲೆಗಳನ್ನು ಲಗತ್ತಿಸಿ kpclcontractappt@gmail.com ಗೆ ಮೇಲ್ ಮಾಡಬೇಕು. ನಿಗದಿತ ಸಮಯ, ದಿನಾಂಕದ ನಂತರ ಸಲ್ಲಿಸಲಾದ ಅರ್ಜಿಗಳನ್ನು ಪರಿಗಣಿಸಲಾಗುವುದಿಲ್ಲ. ಇತರೆ ಯಾವುದೇ ನಮೂನೆಯಲ್ಲಿ ಅರ್ಜಿಯನ್ನು ಸ್ವೀಕರಿಸಲಾಗುವುದಿಲ್ಲ ಎಂದು ಅಧಿಸೂಚನೆಯಲ್ಲಿ ತಿಳಿಸಲಾಗಿದೆ.
ಪ್ರಮುಖ ಸೂಚನೆಗಳು
- ಗುತ್ತಿಗೆ ಆಧಾರದ ನೇಮಕಾತಿಯು ನಿಗಮದ ನಿಬಂಧನೆ ಮತ್ತು ಷರತ್ತುಗಳಿಗೆ ಒಳಪಟ್ಟಿರುತ್ತದೆ. ಆಯ್ಕೆಯಾದ ಅಭ್ಯರ್ಥಿಯು ರೂ.500 ಮೌಲ್ಯದ ಎಂಬೋಸ್ ಮಾಡಿದ ಛಾಪಾ ಕಾಗದದಲ್ಲಿ ನಿಗಮದೊಂದಿಗೆ ಸೇವಾ ಒಪ್ಪಂದವನ್ನು ಮಾಡಿಕೊಳ್ಳತಕ್ಕದ್ದು.
- ಗುತ್ತಿಗೆ ಆಧಾರದ ಮೇಲೆ ನೇಮಕಾತಿಯು ಸಂಪೂರ್ಣವಾಗಿ ತಾತ್ಕಾಲಿಕವಾಗಿರುತ್ತದೆ ಹಾಗೂ ನಿಗಮವು ಯಾವುದೇ ಸಂದರ್ಭದಲ್ಲಿ ಯಾವುದೇ ಕಾರಣಗಳನ್ನು ಮತ್ತು ಪರಿಹಾರವನ್ನು ನೀಡದೆ ಒಂದು ತಿಂಗಳ ಮುಂಚಿತವಾಗಿ ಸೂಚನೆ ನೀಡುವುದರೊಂದಿಗೆ ಸೇವೆಯಿಂದ ತೆಗೆದುಹಾಕಲು ನಿಗಮವು ಹಕ್ಕನ್ನು ಹೊಂದಿರುತ್ತದೆ.
- ಅಭ್ಯರ್ಥಿಯು ಗುತ್ತಿಗೆ ಅವಧಿಯ ಮಧ್ಯದಲ್ಲಿ ಸೇವೆಯಿಂದ ರಾಜೀನಾಮೆ ಕೊಡಲು ಇಚ್ಛಿಸಿದರೆ ಒಂದು ತಿಂಗಳ ಮೊದಲು ನೋಟಿಸ್ ನೀಡಬೇಕು.
- ನಿಗಮವು ಈ ಗುತ್ತಿಗೆ ಆಧಾರದ ನೇಮಕಾತಿಯನ್ನು ಭಾಗಶಃ/ಪೂರ್ಣವಾಗಿ ಯಾವುದೇ ಹಂತದಲ್ಲಿ ಯಾವುದೇ ಕಾರಣ ನೀಡದೆ ರದ್ದುಪಡಿಸುವ ಅಧಿಕಾರವನ್ನು ಹೊಂದಿದೆ.