ನವದೆಹಲಿ: ಭಾನುವಾರ ವೈದ್ಯಕೀಯ ಪ್ರವೇಶ ಪರೀಕ್ಷೆಗೆ ಇನ್ನೇನು ಕೆಲವೇ ಗಂಟೆಗಳು ಬಾಕಿಯಿರುವಂತೆಯೇ ನೀಟ್ ಆಕಾಂಕ್ಷಿಯೊಬ್ಬರು ಆತ್ಮಹತ್ಯೆ ಮಾಡಿಕೊಂಡ ಘಟನೆ(Self Harming) ರಾಜಸ್ಥಾನದ ಕೋಟಾದಲ್ಲಿ ನಡೆದಿದೆ. ಪಾರ್ಶ್ವನಾಥ್ ಪ್ರದೇಶದ ತನ್ನ ಕೋಣೆಯಲ್ಲಿ ಕಬ್ಬಿಣದ ಗ್ರಿಲ್‌ಗೆ ನೇಣು ಬಿಗಿದುಕೊಂಡು ವಿದ್ಯಾರ್ಥಿನಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಕುನ್ಹಾಡಿ ಪೊಲೀಸ್ ಠಾಣೆಯ ಸರ್ಕಲ್ ಇನ್ಸ್ಪೆಕ್ಟರ್ ಅರವಿಂದ್ ಭಾರದ್ವಾಜ್ ಮಾತನಾಡಿ, ವಿದ್ಯಾರ್ಥಿನಿಯು ಮಧ್ಯಪ್ರದೇಶದ ಶಿಯೋಪುರ್ ಮೂಲದವಳು ಎಂದು ಹೇಳಿದ್ದಾರೆ.
ಕೋಚಿಂಗ್ ಸಂಸ್ಥೆಯೊಂದರಲ್ಲಿ ನೀಟ್-ಯುಜಿಗೆ ತಯಾರಿ ನಡೆಸಲೆಂದೇ ವಿದ್ಯಾರ್ಥಿನಿಯು ಹಲವಾರು ವರ್ಷಗಳಿಂದ ರಾಜಸ್ಥಾನದ ಕೋಟಾದಲ್ಲಿ ತನ್ನ ಹೆತ್ತವರೊಂದಿಗೆ ವಾಸಿಸುತ್ತಿದ್ದಳು. ಶನಿವಾರ ಸಂಜೆ ಆಕೆ ತನ್ನ ಕೋಣೆಯಲ್ಲಿ ಕಬ್ಬಿಣದ ಗ್ರಿಲ್‌ನಿಂದ ಸ್ಕಾರ್ಫ್ ಬಳಸಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಘಟನೆಯ ಸಮಯದಲ್ಲಿ ಆಕೆಯ ಕುಟುಂಬ ಸದಸ್ಯರು ಮನೆಯಲ್ಲಿದ್ದರು. ರಾತ್ರಿ 9 ಗಂಟೆ ಸುಮಾರಿಗೆ ಆಕೆ ಆತ್ಮಹತ್ಯೆ ಮಾಡಿಕೊಂಡಿರುವುದು ಬೆಳಕಿಗೆ ಬಂದಿದೆ.
ಮೇ 4ರ ಭಾನುವಾರ ನೀಟ್ ಪರೀಕ್ಷೆ ನಡೆದಿದೆ. ವಿದ್ಯಾರ್ಥಿನಿಯು ಈ ವರ್ಷ ಪರೀಕ್ಷೆ ಬರೆಯಲು ಸಜ್ಜಾಗಿದ್ದಳು. ಆದರೆ, ಪರೀಕ್ಷೆಗೆ ಕೆಲವು ಗಂಟೆಗಳಿರುವಂತೆಯೇ ಆತ್ಮಹತ್ಯೆ ನಿರ್ಧಾರ ಕೈಗೊಂಡಿದ್ದು ಅಚ್ಚರಿಗೆ ಕಾರಣವಾಗಿದೆ.
ಆಕೆಯ ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ. ಆಕೆಯ ಕೋಣೆಯಲ್ಲಿ ಯಾವುದೇ ಆತ್ಮಹತ್ಯೆ ಪತ್ರ ಕಂಡುಬಂದಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.
ಈ ವರ್ಷ ಅಂದರೆ 4 ತಿಂಗಳ ಅವಧಿಯಲ್ಲಿ ರಾಜಸ್ಥಾನದ ಕೋಟಾದಲ್ಲಿ ನಡೆದಿರುವ ಇಂತಹ 14ನೇ ಪ್ರಕರಣ ಇದಾಗಿದೆ. ಕಳೆದ ವರ್ಷ ಕೋಟಾದಲ್ಲಿ ಕೋಚಿಂಗ್ ವಿದ್ಯಾರ್ಥಿಗಳು ಆತ್ಮಹತ್ಯೆ ಮಾಡಿಕೊಂಡ ಒಟ್ಟು 17 ಪ್ರಕರಣಗಳು ವರದಿಯಾಗಿದ್ದವು.
ಪ್ರತಿ ವರ್ಷ ಮುಖ್ಯವಾಗಿ ನೀಟ್ (ವೈದ್ಯಕೀಯ ಕಾಲೇಜು ಪ್ರವೇಶ) ಮತ್ತು ಜೆಇಇ (ಐಐಟಿಗಳಂತಹ ಉನ್ನತ ಎಂಜಿನಿಯರಿಂಗ್ ಕಾಲೇಜುಗಳು)ಗಾಗಿ ಕೋಟಾದ ಕೋಚಿಂಗ್ ಸಂಸ್ಥೆಗಳಲ್ಲಿ ಸುಮಾರು ಎರಡು ಲಕ್ಷ ವಿದ್ಯಾರ್ಥಿಗಳು ದಾಖಲಾಗುತ್ತಾರೆ.
ಕಳೆದ ಮಾರ್ಚ್ ತಿಂಗಳಲ್ಲಿ ರಾಜಸ್ಥಾನದ ಉನ್ನತ ಶಿಕ್ಷಣ ಸಚಿವ ಮತ್ತು ಉಪಮುಖ್ಯಮಂತ್ರಿ ಡಾ.ಪ್ರೇಮ್ಚಂದ್ ಬೈರ್ವಾ ಅವರು ‘ರಾಜಸ್ಥಾನ ಕೋಚಿಂಗ್ ಸೆಂಟರ್ ಕಂಟ್ರೋಲ್ ಅಂಡ್ ರೆಗ್ಯುಲೇಷನ್ ಬಿಲ್ 2025’ ಅನ್ನು ವಿಧಾನಸಭೆಯಲ್ಲಿ ಮಂಡಿಸಿದ್ದರು. ಈ ಮಸೂದೆಯಡಿ, ಕೋಚಿಂಗ್ ಸಂಸ್ಥೆಗಳು ನೋಂದಣಿ, ಕಾರ್ಯಾಚರಣೆ, ಶುಲ್ಕ, ಮಾನಸಿಕ ಆರೋಗ್ಯ ಸೇವೆಗಳು, ವೃತ್ತಿ ಸಲಹೆ, ಕುಂದುಕೊರತೆ ಪರಿಹಾರ ಮತ್ತು ದಾರಿತಪ್ಪಿಸುವ ಜಾಹೀರಾತುಗಳ ನಿಷೇಧದಂತಹ ಪ್ರಮುಖ ಅಂಶಗಳು ಸೇರಿದಂತೆ ಅನೇಕ ಕಠಿಣ ನಿಯಮಗಳನ್ನು ಅನುಸರಿಸಬೇಕಾಗುತ್ತದೆ ಎಂದು ಹೇಳಿದ್ದರು.