ಅಹಮದಾಬಾದ್: ವೆಸ್ಟ್ ಇಂಡೀಸ್ ವಿರುದ್ಧದ ಮೊದಲ ಟೆಸ್ಟ್ ಪಂದ್ಯದಲ್ಲಿ ಅಮೋಘ ಶತಕ ಸಿಡಿಸಿದ ಭಾರತದ ಅನುಭವಿ ಆಟಗಾರ ಕೆ.ಎಲ್. ರಾಹುಲ್, ತಮ್ಮ ಎಂದಿನ ಸಂಭ್ರಮಾಚರಣೆಗಿಂತ ಭಿನ್ನವಾಗಿ, ಮೃದುವಾಗಿ ಶಿಳ್ಳೆ ಹೊಡೆಯುವ ಮೂಲಕ ಎಲ್ಲರ ಗಮನ ಸೆಳೆದರು. ಬರೋಬ್ಬರಿ ಒಂಬತ್ತು ವರ್ಷಗಳ ನಂತರ ತವರಿನಲ್ಲಿ ಟೆಸ್ಟ್ ಶತಕ ಬಾರಿಸಿದ ಖುಷಿಯಲ್ಲಿದ್ದ ರಾಹುಲ್, ತಮ್ಮ ಈ ವಿಶಿಷ್ಟ ಸಂಭ್ರಮದ ಹಿಂದಿನ ಗುಟ್ಟನ್ನು ಎರಡನೇ ದಿನದಾಟದ ಬಳಿಕ ಬಿಚ್ಚಿಟ್ಟಿದ್ದಾರೆ. ಈ ಶತಕವನ್ನು ತಮ್ಮ ಪ್ರೀತಿಯ ಪುತ್ರಿ ಎವಾರಾ ಮತ್ತು ಪತ್ನಿ ಆಥಿಯಾ ಶೆಟ್ಟಿಗೆ ಅರ್ಪಿಸುವುದಾಗಿ ಅವರು ಹೇಳಿದ್ದಾರೆ.
ಅಹಮದಾಬಾದ್‌ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಪಂದ್ಯದ ಎರಡನೇ ದಿನದಂದು, ಕೆ.ಎಲ್. ರಾಹುಲ್ ತಮ್ಮ ಕಲಾತ್ಮಕ ಬ್ಯಾಟಿಂಗ್ ಮೂಲಕ ವಿಂಡೀಸ್ ಬೌಲರ್‌ಗಳನ್ನು ದಂಡಿಸಿದರು. 190 ಎಸೆತಗಳಲ್ಲಿ 12 ಸುಂದರ ಬೌಂಡರಿಗಳ ನೆರವಿನಿಂದ ಅವರು 100 ರನ್ ಗಳಿಸಿದರು. ಇದು ಅವರ ಟೆಸ್ಟ್ ವೃತ್ತಿಜೀವನದ 11ನೇ ಶತಕವಾದರೂ, ತವರಿನಲ್ಲಿ ಅವರು ಬಾರಿಸಿದ್ದು ಕೇವಲ ಎರಡನೇ ಶತಕ. 2016ರಲ್ಲಿ ಇಂಗ್ಲೆಂಡ್ ವಿರುದ್ಧ ಚೆನ್ನೈನಲ್ಲಿ 199 ರನ್ ಗಳಿಸಿದ ನಂತರ, ಭಾರತದ ನೆಲದಲ್ಲಿ ಶತಕದ ಬರ ಎದುರಿಸುತ್ತಿದ್ದ ರಾಹುಲ್, ಬರೋಬ್ಬರಿ 3,211 ದಿನಗಳ ಬಳಿಕ ಈ ಸಾಧನೆ ಮಾಡಿದ್ದಾರೆ. ಇದು ಭಾರತೀಯ ಬ್ಯಾಟರ್ ಒಬ್ಬರು ತವರಿನಲ್ಲಿ ಎರಡು ಶತಕಗಳ ನಡುವೆ ತೆಗೆದುಕೊಂಡ ಅತಿ ದೀರ್ಘಾವಧಿಯಾಗಿದೆ.
ಶತಕ ಗಳಿಸಿದ ಬಳಿಕ ತಮ್ಮ ವಿಶಿಷ್ಟ ಸಂಭ್ರಮದ ಬಗ್ಗೆ ಮಾತನಾಡಿದ ರಾಹುಲ್, “ಈ ಸಂಭ್ರಮ ನನ್ನ ಮಗಳಿಗಾಗಿ. ನನ್ನ ಈ ಶತಕವನ್ನು ನನ್ನ ಪುತ್ರಿ ಎವಾರಾಗೆ ಸಮರ್ಪಿಸುತ್ತೇನೆ” ಎಂದು ಭಾವನಾತ್ಮಕವಾಗಿ ನುಡಿದರು. ಈ ಮೂಲಕ, ತಮ್ಮ ವೃತ್ತಿಜೀವನದ ಈ ಮಹತ್ವದ ಕ್ಷಣವನ್ನು ಕುಟುಂಬಕ್ಕೆ ಅರ್ಪಿಸಿ ಸಂಭ್ರಮಿಸಿದರು.
ಸವಾಲುಗಳನ್ನು ಮೆಟ್ಟಿ ನಿಂತ ಬಗ್ಗೆ ರಾಹುಲ್ ಮಾತು:
ದೀರ್ಘ ವಿರಾಮದ ನಂತರ ತಂಡಕ್ಕೆ ಮರಳಿದ್ದರ ಬಗ್ಗೆ ಮಾತನಾಡಿದ ಅವರು, “ಸುಮಾರು 5-6 ವಾರಗಳ ಕಾಲ ನಾನು ಮೈದಾನದಿಂದ ಹೊರಗಿದ್ದೆ. ಹಾಗಾಗಿ, ಪುನಃ ಆಡಲು ಬಂದಾಗ ಸ್ವಲ್ಪ ಆತಂಕವಿತ್ತು. ಹಳೆಯ ಲಯಕ್ಕೆ ಮರಳುವುದು ಮತ್ತು ದೀರ್ಘ ಮಾದರಿಯ ಕ್ರಿಕೆಟ್‌ಗೆ ಹೊಂದಿಕೊಳ್ಳುವುದು ದೈಹಿಕವಾಗಿ ಸವಾಲಿನಿಂದ ಕೂಡಿತ್ತು” ಎಂದು ಒಪ್ಪಿಕೊಂಡರು. “ಇಲ್ಲಿನ ಹವಾಮಾನವು ದೈಹಿಕವಾಗಿ ಬಹಳಷ್ಟು ಸವಾಲುಗಳನ್ನು ಒಡ್ಡುತ್ತದೆ. ಆದರೆ, ಕ್ರೀಸ್‌ನಲ್ಲಿ ಸ್ವಲ್ಪ ಸಮಯ ಕಳೆದು, ರನ್ ಗಳಿಸಿದ್ದು ಸಂತಸ ತಂದಿದೆ. ನನ್ನ ಬ್ಯಾಟಿಂಗ್ ಅನ್ನು ನಾನು ನಿಜವಾಗಿಯೂ ಆನಂದಿಸುತ್ತಿದ್ದೇನೆ” ಎಂದು ಹೇಳಿದರು.
ತಮ್ಮ ಬ್ಯಾಟಿಂಗ್ ಶೈಲಿಯಲ್ಲಿನ ಬದಲಾವಣೆ ಬಗ್ಗೆ ಮಾತನಾಡಿದ ಅವರು, “ಇಂಗ್ಲೆಂಡ್ ಪ್ರವಾಸವು ಖುಷಿ ಕೊಟ್ಟಿತ್ತು. ಅಲ್ಲಿ ರನ್ ಗಳಿಸಿದ್ದು ಆತ್ಮವಿಶ್ವಾಸವನ್ನು ಹೆಚ್ಚಿಸಿತ್ತು. ತವರಿನಲ್ಲಿ ಸ್ಪಿನ್ನರ್‌ಗಳು ಮತ್ತು ಹರಡಿದ ಫೀಲ್ಡ್ ಇರುವಾಗ, ಸಿಂಗಲ್ಸ್ ಮತ್ತು ಡಬಲ್ಸ್ ಮೂಲಕ ರನ್ ಗಳಿಸುವುದು ಮುಖ್ಯ. ಬೌಂಡರಿಗಳು ಸುಲಭವಾಗಿ ಬರುವುದಿಲ್ಲ. ಈ ಮಾನಸಿಕ ಬದಲಾವಣೆಯನ್ನು ನಾನು ಮಾಡಿಕೊಂಡಿದ್ದೇನೆ. ಸಿಂಗಲ್ಸ್ ಮೂಲಕವೂ ರನ್ ಗಳಿಸುವುದನ್ನು ಆನಂದಿಸಲು ಕಲಿತಿದ್ದೇನೆ,” ಎಂದು ತಮ್ಮ ಹೊಸ ಆಟದ ಶೈಲಿಯನ್ನು ವಿವರಿಸಿದರು.
ರಾಹುಲ್ ಅವರ ಶತಕದ ಜೊತೆಗೆ, ಯುವ ವಿಕೆಟ್ ಕೀಪರ್-ಬ್ಯಾಟರ್ ಧ್ರುವ್ ಜುರೆಲ್ (125) ಚೊಚ್ಚಲ ಶತಕ ಮತ್ತು ಆಲ್‌ರೌಂಡರ್ ರವೀಂದ್ರ ಜಡೇಜಾ (104*) ಅವರ ಅಜೇಯ ಶತಕದ ನೆರವಿನಿಂದ ಭಾರತ ತಂಡವು ಎರಡನೇ ದಿನದಾಟದ ಅಂತ್ಯಕ್ಕೆ 5 ವಿಕೆಟ್ ನಷ್ಟ ಮಾಡಿಕೊಂಡಿದ್ದು. 448 ರನ್ ಗಳಿಸಿ, 286 ರನ್‌ಗಳ ಬೃಹತ್ ಮುನ್ನಡೆ ಸಾಧಿಸಿದೆ.