ರಿಷಬ್ ಶೆಟ್ಟಿ ನಿರ್ದೇಶನ ಮಾಡುತ್ತಿರುವ ಕಾಂತಾರ: ಚಾಪ್ಟರ್ 1 (Kantara: Chapter 1) ಸಿನಿಮಾ ತಂಡಕ್ಕೆ ದೈವ ನುಡಿದಂತೆ ಒಂದಲ್ಲ ಒಂದು ಗಂಡಾಂತರ ಎದುರಾಗುತ್ತಲೇ ಇವೆ. ಈಗ ಶೂಟಿಂಗ್ ಸಂದರ್ಭದಲ್ಲಿ ಅವಘಡವೊಂದು ನಡೆದಿದ್ದು, ಜೂನಿಯರ್ ಆರ್ಟಿಸ್ಟ್ ಜಲಸಮಾಧಿಯಾಗಿದ್ದಾರೆ. ಈ ಮೂಲಕ ಸಿನಿಮಾ ತಂಡಕ್ಕೆ ಮತ್ತೊಂದು ವಿಘ್ನ ಎದುರಾಗಿದೆ.
ಉಡುಪಿ ಜಿಲ್ಲೆಯ ಬೈಂದೂರಿನ ಕೊಲ್ಲೂರಿನಲ್ಲಿ ಈ ಘಟನೆ ನಡೆದಿದೆ. ಕಾಂತಾರ ಚಾಪ್ಟರ್ 1ರಲ್ಲಿ ಕೆಲಸ ಮಾಡುತ್ತಿದ್ದ ಕೇರಳ ಮೂಲದ ಜೂನಿಯರ್ ಆರ್ಟಿಸ್ಟ್ (Junior Artist) ಕಪಿಲ್ ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ್ದಾರೆ.
ಶೂಟಿಂಗ್ ಮುಗಿಸಿದ ಬಳಿಕ ಕೊಲ್ಲೂರಿನ ಸೌಪರ್ಣಿಕ ನದಿಯಲ್ಲಿ ಕಪಿಲ್ ಈಜಲು ತೆರಳಿದ್ದಾರೆ. ಆದರೆ, ನೀರಿನ ಆಳ ಗೊತ್ತಾಗದೆ, ಮುಳುಗಿ ಸಾವನ್ನಪ್ಪಿದ್ದಾರೆ. ಕೊಲ್ಲೂರು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.
ಹಿಂದೆ ಕೊಲ್ಲೂರಿನಲ್ಲೇ ಜೂನಿಯರ್ ಆರ್ಟಿಸ್ಟ್ಗಳಿದ್ದ ಬಸ್ ಪಲ್ಟಿಯಾಗಿ ಅಪಘಾತ ಸಂಭವಿಸಿತ್ತು. ಬಳಿಕ ಗಾಳಿ ಮಳೆಗೆ ಬೃಹತ್ ಸೆಟ್ ಹಾರಿ ಹೋಗಿತ್ತು. ಈಗ ಜೂನಿಯರ್ ಆರ್ಟಿಸ್ಟ್ ದಾರುಣ ಸಾವು ಸಂಭವಿಸಿದೆ.
‘ಹೊಂಬಾಳೆ ಫಿಲ್ಮ್ಸ್’ ಮೂಲಕ ‘ಕಾಂತಾರ: ಚಾಪ್ಟರ್ 1’ ಸಿನಿಮಾ ನಿರ್ಮಾಣ ಆಗುತ್ತಿದೆ. ‘ಕಾಂತಾರ’ ಸಿನಿಮಾದ ಪ್ರೀಕ್ವೆಲ್ ಆಗಿ ಈ ಚಿತ್ರ ಮೂಡಿಬರುತ್ತಿದೆ.