ಚೆನ್ನೈ: ಬಹುಭಾಷಾ ನಟ, ರಾಜಕಾರಣಿ ಕಮಲ್ ಹಾಸನ್(Kamal Haasan) ಅವರು ರಾಜ್ಯಸಭಾ(Rajya Sabha) ಸದಸ್ಯರಾಗಲು ಸಜ್ಜಾಗಿದ್ದಾರೆ. ತಮಿಳುನಾಡಿನ ಎಂ.ಕೆ. ಸ್ಟಾಲಿನ್ ನೇತೃತ್ವದ ಡಿಎಂಕೆ ಸರ್ಕಾರವು ಇಂದು ತನ್ನ ರಾಜ್ಯಸಭಾ ಅಭ್ಯರ್ಥಿಗಳ ಪಟ್ಟಿಯನ್ನು ಪ್ರಕಟಿಸಿದ್ದು, ಅದರಲ್ಲಿ ಪಿ.ವಿಲ್ಸನ್ ಅವರನ್ನು ಎರಡನೇ ಅವಧಿಗೆ ಹೆಸರಿಸಲಾಗಿದೆ. ಜೊತೆಗೆ ಆರ್.ಶಿವಲಿಂಗಮ್ ಮತ್ತು ರೋಕಯ್ಯ ಮಲಿಕ್ ಅವರ ಹೆಸರನ್ನೂ ಸೇರ್ಪಡೆ ಮಾಡಲಾಗಿದೆ. ತನ್ನ ಕೋಟಾದಲ್ಲಿ ಬರುವ ಇನ್ನೊಂದು ಸೀಟನ್ನು ಕಮಲ್ ಹಾಸನ್ ಅವರ ಮಕ್ಕಳ್ ನೀಧಿ ಮಯ್ಯಮ್ (ಎಂಎನ್ಎಂ) ಪಕ್ಷಕ್ಕೆ ಮೀಸಲಿಟ್ಟಿದೆ. 2024ರ ಲೋಕಸಭೆ ಚುನಾವಣೆ ವೇಳೆ ಡಿಎಂಕೆಗೆ ಕಮಲ್ ಪಕ್ಷ ನೀಡಿದ ಬೆಂಬಲಕ್ಕೆ ಪ್ರತಿಯಾಗಿ ರಾಜ್ಯಸಭಾ ಸ್ಥಾನವನ್ನು ಕಮಲ್ ಅವರಿಗೆ ಡಿಎಂಕೆ ನೀಡುತ್ತಿದೆ. 2024ರ ಚುನಾವಣೆಯ ವೇಳೆ ನಡೆದಿದ್ದ ಒಪ್ಪಂದದಂತೆ ಈ ಕ್ರಮ ಕೈಗೊಳ್ಳಲಾಗಿದೆ ಎಂದು ಮೂಲಗಳು ತಿಳಿಸಿವೆ.
2024ರ ಚುನಾವಣೆಯಲ್ಲಿ ತಮಿಳುನಾಡಿನಲ್ಲಿ ಎಂಎನ್ಎಂ ಪಕ್ಷವು ಡಿಎಂಕೆ-ಕಾಂಗ್ರೆಸ್ ಮೈತ್ರಿಗೆ ಬೆಂಬಲ ಸೂಚಿಸಿತ್ತು. ಅದರಂತೆ, ಈ ಮೈತ್ರಿಯು ರಾಜ್ಯದ ಎಲ್ಲ 39 ಕ್ಷೇತ್ರಗಳಲ್ಲೂ ಜಯ ಸಾಧಿಸಿತ್ತು. ಅಂದು ನೀಡಿದ ಬೆಂಬಲಕ್ಕೆ ಪ್ರತಿಯಾಗಿ ರಾಜ್ಯಸಭಾ ಸ್ಥಾನವನ್ನು ಕಲ್ಪಿಸುವುದಾಗಿ ಸ್ಟಾಲಿನ್ ಆ ಸಮಯದಲ್ಲೇ ಕಮಲ್ ಹಾಸನ್ ಅವರಿಗೆ ಭರವಸೆ ನೀಡಿದ್ದರು ಎಂದು ಡಿಎಂಕೆ ಮೂಲಗಳು ಹೇಳಿವೆ.
ಈ ತಿಂಗಳು ತಮಿಳುನಾಡಿನ 6 ರಾಜ್ಯಸಭಾ ಸ್ಥಾನಗಳು ಖಾಲಿಯಾಗಿದ್ದು, ಜೂನ್ 19ರಂದು ಅವುಗಳನ್ನು ಭರ್ತಿ ಮಾಡಲು ಚುನಾವಣೆ ನಡೆಯಲಿದೆ. ಪ್ರಸ್ತುತ 3 ರಾಜ್ಯಸಭಾ ಸ್ಥಾನಗಳು ಡಿಎಂಕೆ ಬಳಿಯಿದ್ದು, 1 ಎಐಎಂಡಿಎಂಕೆ ಬಳಿ ಮತ್ತು ತಲಾ ಒಂದು ಸ್ಥಾನಗಳನ್ನು ಪಿಎಂಕೆ ನಾಯಕ ಅನ್ಬುಮಣಿ ರಾಮದಾಸ್ ಹಾಗೂ ಎಂಡಿಎಂಕೆಯ ವೈಕೋ ಹೊಂದಿದ್ದಾರೆ.
ಇತ್ತೀಚೆಗಷ್ಟೇ ತಮಿಳುನಾಡು ಸಚಿವ ಪಿ.ಕೆ.ಶೇಖರ್ ಬಾಬು ಅವರು ಕಮಲ್ ಹಾಸನ್ ಅವರನ್ನು ಅವರ ನಿವಾಸದಲ್ಲಿ ಭೇಟಿಯಾಗಿ, ಈ ಕುರಿತು ಮಾತುಕತೆ ನಡೆಸಿದ್ದರು. ಇಂದು ನಡೆದ ಎಂಎನ್ಎಂ ಕಾರ್ಯಕಾರಿಣಿಯಲ್ಲಿ ಕಮಲ್ ಹಾಸನ್ ಅವರನ್ನು ರಾಜ್ಯಸಭಾ ಅಭ್ಯರ್ಥಿಯಾಗಿ ನಾಮನಿರ್ದೇಶನ ಮಾಡಿ ಪಕ್ಷವು ನಿರ್ಣಯ ಕೈಗೊಂಡಿದೆ.
2019ರ ಲೋಕಸಭೆ ಚುನಾವಣೆಯಲ್ಲಿ ಎಂಎನ್ಎಂ ಪಕ್ಷವು, ತಾನು ಸ್ಪರ್ಧಿಸಿದ್ದ ಕ್ಷೇತ್ರಗಳಲ್ಲಿ ಶೇ.3.72 ಮತಗಳನ್ನು ಗಳಿಸಿತ್ತು. 2021ರ ತಮಿಳುನಾಡು ವಿಧಾನಸಭೆ ಚುನಾವಣೆಯಲ್ಲಿ ಏಕಾಂಗಿಯಾಗಿ ಸ್ಪರ್ಧಿಸಿದ್ದ ಪಕ್ಷವು ಶೂನ್ಯ ಸಾಧನೆ ಮಾಡಿತ್ತು. 2021ರ ಚುನಾವಣೆಯಲ್ಲಿ ಕಮಲ್ ಹಾಸನ್ ಅವರು ಕೊಯಮತ್ತೂರು ದಕ್ಷಿಣ ಕ್ಷೇತ್ರದಲ್ಲಿ ಸ್ಪರ್ಧಿಸಿದರಾದರೂ, ಅಲ್ಪ ಮತಗಳ ಅಂತರದಿಂದ ಬಿಜೆಪಿಯ ವನತಿ ಶ್ರೀನಿವಾಸನ್ ವಿರುದ್ಧ ಸೋಲು ಕಂಡರು. 2022ರ ನಗರ ಸ್ಥಳೀಯ ಸಂಸ್ಥೆ ಚುನಾವಣೆಯಲ್ಲೂ ಪಕ್ಷವು ಹೀನಾಯ ಸೋಲು ಕಂಡಿತು. 140 ಸೀಟುಗಳಲ್ಲಿ ಸ್ಪರ್ಧಿಸಿದ್ದ ಎಂಎನ್ಎಂ ಒಂದೇ ಒಂದು ಸೀಟು ಕೂಡ ಗೆದ್ದಿರಲಿಲ್ಲ.