ಶಿವಮೊಗ್ಗ: ಶಾಲೆಯಲ್ಲಿ ಯೇಸುವಿನ ಪ್ರಾರ್ಥನೆ ಮಾಡಿಸಿರುವ ಘಟನೆ ನಡೆದಿದ್ದು, ಹಿಂದೂ ಸಂಘಟನೆಗಳು ಪ್ರತಿಭಟನೆ ನಡೆಸಿವೆ. ಪ್ರತಿಭಾ ಕಾರಂಜಿ ಕಾರ್ಯಕ್ರಮದ ವೇಳೆ ಆರಂಭದಲ್ಲಿ ಯೇಸುವಿನ ಪ್ರಾರ್ಥನೆ ಮಾಡಿಸಿದ ಘಟನೆ ಶಿವಮೊಗ್ಗ (Shivamogga) ಜಿಲ್ಲೆಯ ಸಾಗರ ತಾಲೂಕಿನ ಮಾಸೂರು ಗ್ರಾಮದಲ್ಲಿ ನಡೆದಿದೆ.
ಗ್ರಾಮದ ಸರ್ಕಾರಿ ಪ್ರೌಢಶಾಲೆಯಲ್ಲಿ ಈ ಘಟನೆ ನಡೆದಿದೆ. ಕಳೆದ 13 ರಂದು ಮಾಸೂರು ಪ್ರೌಢಶಾಲೆಯಲ್ಲಿ ನಡೆದಿದ್ದ ಕಾರ್ಯಕ್ರಮದ ಆರಂಭದಲ್ಲಿ ಪ್ರಾರ್ಥನಾ ಗೀತೆಯಾಗಿ ಯೇಸುವಿನ ಗೀತೆ ಹಾಡಿಸಿದ್ದು, ಆಕ್ರೋಶ ವ್ಯಕ್ತವಾಗಿದೆ. ಈ ಆರೋಪದ ಹಿನ್ನೆಲೆಯಲ್ಲಿ ವಿಜ್ಞಾನ ಶಿಕ್ಷಕ ಫ್ರಾಂಕಿ ಫ್ರಾನ್ಸಿಸ್ ವಿರುದ್ದ ಆರೋಪ ಕೇಳಿ ಬಂದಿದೆ.
ಯೇಸುವಿನ ಗೀತೆ ಹಾಡಿಸಿದ್ದಕ್ಕೆ ವಿಶ್ವ ಹಿಂದೂ ಪರಿಷತ್, ಬಜರಂಗದಳ ಆಕ್ಷೇಪ ವ್ಯಕ್ತಪಡಿಸಿದ್ದು, ಶಾಲೆಯಲ್ಲಿ ಒಬ್ಬನೇ ಒಬ್ಬ ಕ್ರಿಶ್ಚಿಯನ್ ವಿದ್ಯಾರ್ಥಿ ಇಲ್ಲ. ಹೀಗಿರುವಾಗ ಯೇಸುವಿನ ಗೀತೆ ಏಕೆ ಹಾಡಿಸಿದರು ಎಂದು ಪ್ರಶ್ನಿಸಿವೆ. ಈ ಘಟನೆಯ ಮೂಲಕ ಹಿಂದೂಗಳ ಭಾವನೆಗೆ ಧಕ್ಕೆ ಮಾಡುವ ಕಾರ್ಯ ಮಾಡಲಾಗುತ್ತಿದೆ. ಹೀಗಾಗಿ ಕೂಡಲೇ ಶಿಕ್ಷಕಿಯನ್ನು ಅಮಾನತು ಮಾಡಬೇಕು ಎಂಬ ಆಗ್ರಹ ಕೇಳಿ ಬಂದಿದೆ.