ಮಂಡ್ಯ: ಧರ್ಮಸ್ಥಳ ಕ್ಷೇತ್ರದ ವಿರುದ್ಧ ಷಡ್ಯಂತ್ರ ರೂಪಿಸಲು ವಿದೇಶಿ ಫಂಡಿಂಗ್ ಹರಿದು ಬರುತ್ತಿರುವುದರ ಬಗ್ಗೆ ಅನುಮಾನವಿದೆ. ಈ ಬಗ್ಗೆ ಸತ್ಯಾಸತ್ಯತೆ ಹೊರತರಲು ಎನ್.ಐ.ಎ ತನಿಖೆ ಅವಶ್ಯಕವಾಗಿದೆ ಎಂದು ಜೆಡಿಎಸ್ ಯುವ ಘಟದ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಒತ್ತಾಯಿಸಿದ್ದಾರೆ.
ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಅವರು, ಶ್ರೀ ಕ್ಷೇತ್ರದ ಧರ್ಮಸ್ಥಳ ಪಾವಿತ್ರ್ಯತೆಯನ್ನು ಹಾಳು ಮಾಡಲು ಒಳಸಂಚು ರೂಪಿಸಿದ್ದು, ರಾಜ್ಯದ ಜನರಿಗೆ ಎಸ್.ಐ.ಟಿ ತನಿಖೆ ಮೇಲೆ ನಿರೀಕ್ಷೆಗಳಿಲ್ಲ. ಎನ್.ಐ.ಎ ತನಿಖೆಗೆ ವಹಿಸಿದರೆ ಷಡ್ಯಂತ್ರ ಬಯಲಾಗಲಿದೆ ಎಂದು ಹೇಳಿದ್ದಾರೆ.
ಧರ್ಮಸ್ಥಳ ಯಾತ್ರೆಗೆ ಹಾಸನವನ್ನು ಕೇಂದ್ರ ಸ್ಥಾನವನ್ನಾಗಿ ಮಾಡಿದ್ದು, ಮುಖಂಡರು, ಕಾರ್ಯಕರ್ತರು ಹಾಸನಕ್ಕೆ ತೆರಳಲಿದ್ದಾರೆ. ಅಲ್ಲಿ ಉಪಾಹಾರ ವ್ಯವಸ್ಥೆ ಮಾಡಲಾಗಿದೆ. ಬಳಿಕ ಧರ್ಮಸ್ಥಳ ನೇತ್ರಾವತಿಗೆ ತೆರಳಿ, ಅಲ್ಲಿ ಸ್ನಾನ ಮಾಡಿದ ನಂತರ ಅಲ್ಲಿಂದ ಮಂಜುನಾಥಸ್ವಾಮಿ ದೇವಸ್ಥಾನದವರೆಗೆ ಪಾದಯಾತ್ರೆ ಮಾಡುತ್ತೇವೆ. ಈ ಯಾತ್ರೆಯಲ್ಲಿ ಜೆಡಿಎಸ್ ಲೋಕಸಭಾ ಸದಸ್ಯರು, ಶಾಸಕರು, ಮಾಜಿ ಸಂಸದರು, ಮಾಜಿ ಸಚಿವರು, ಮಾಜಿ ಶಾಸಕರು, ಕಾರ್ಯಕರ್ತರು, ಭಕ್ತರು ರಾಜ್ಯದ ವಿವಿಧ ಜಿಲ್ಲೆಗಳಿಂದ ಆಗಮಿಸಲಿದ್ದಾರೆ ಎಂದು ತಿಳಿಸಿದ್ದಾರೆ.
ನಾಳೆ ಧರ್ಮಸ್ಥಳ ಸತ್ಯ ಯಾತ್ರೆ: ಧರ್ಮಸ್ಥಳದ ಬಗ್ಗೆ ಕೆಲವರು ಅಪಪ್ರಚಾರ ಮಾಡುತ್ತಿದ್ದು, ನೈತಿಕ ಬೆಂಬಲ ವ್ಯಕ್ತಪಡಿಸಲು ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿ ಸೂಚನೆಯೆಂತೆ ಆ.31ರಂದು ಜೆಡಿಎಸ್ ವತಿಯಿಂದ ʼಧರ್ಮಸ್ಥಳ ಸತ್ಯಯಾತ್ರೆʼಯನ್ನು ಹಮ್ಮಿಕೊಂಡಿದ್ದೇವೆ. ಯಾವುದೇ ರಾಜಕೀಯ ಬೆರೆಸದೆ ಧರ್ಮಸ್ಥಳ ಸತ್ಯ ಯಾತ್ರೆ ನಡೆಸುತ್ತಿದ್ದೇವೆ. ಧರ್ಮ ರಕ್ಷಣೆಯ ಉದ್ದೇಶದಿಂದ ಈ ಯಾತ್ರೆ ಆಯೋಜನೆ ಮಾಡಿದ್ದೇವೆ. ಧರ್ಮಸ್ಥಳ ಪುಣ್ಯ ಕ್ಷೇತ್ರದಲ್ಲಿ ಸಾಕಷ್ಟು ಸಮಾಜಮುಖಿ ಕೆಲಸಗಳು ನಡೆದಿವೆ. ಧರ್ಮಸ್ಥಳ ವಿರುದ್ಧ ನಡೆದ ಅಪಪ್ರಚಾರ ವಿರೋಧಿಸಿ ನಾಳೆ ಯಾತ್ರೆ ಕೈಗೊಂಡಿದ್ದೇವೆ ಎಂದು ತಿಳಿಸಿದ್ದಾರೆ.
800 ವರ್ಷ ಇತಿಹಾಸವಿರುವ ಶ್ರೀಕ್ಷೇತ್ರದ ವಿರುದ್ಧ ಪಿತೂರಿ ನಡೆಸಿದ್ದಾರೆ. ಧರ್ಮಸ್ಥಳ ವಿಚಾರದಲ್ಲಿ ಯಾವ ಆಧಾರದಲ್ಲಿ ಎಸ್.ಐ.ಟಿ ರಚನೆಗೆ ನಿರ್ಧಾರ ಮಾಡಿತು.? ಈ ಪ್ರಶ್ನೆ ಲಕ್ಷಾಂತರ ಭಕ್ತರಲ್ಲಿ ಮೂಡಿದೆ ಎಂದು ವಾಗ್ದಾಳಿ ನಡೆಸಿದರು.
ಒಬ್ಬರೋ, ಇಬ್ಬರೋ ದೂರು ಕೊಟ್ಟ ತಕ್ಷಣ ಎಸ್.ಐ.ಟಿ ರಚನೆ ಮಾಡಿದ್ದಾರೆ. ಚಿನ್ನಯ್ಯ ಎಂಬ ವ್ಯಕ್ತಿ ಬುರುಡೆ ತಂದು ಧರ್ಮಸ್ಥಳದಲ್ಲಿ ಮಾಸ್ ಮರ್ಡರ್ ನಡೆದಿದೆ ಎಂದು ಬಿಂಬಿಸಿದ್ರು. ಮೊದಲು ಎಫ್.ಎಸ್.ಎಲ್ ವರದಿ ಪಡೆದ ಬಳಿಕ ವಿಷಯ ಗಂಭೀರತೆ ಸರ್ಕಾರ ಅರಿಯಬೇಕಿತ್ತು. ಸಿದ್ದರಾಮಯ್ಯ ಹೆಸರಲ್ಲಿ ಎಸ್.ಐ.ಟಿ ಆಗಿದೆ. ಧರ್ಮಾಧಿಕಾರಿಗಳು ಮತ್ತು ಅವರ ಕುಟುಂಬಕ್ಕೆ ನೈತಿಕ ಬೆಂಬಲ ಸೂಚಿಸಬೇಕಿದೆ ಎಂದು ಹೇಳಿದ್ದಾರೆ.



















