ಮುಂಬೈ: 26 /11 ಬ್ಲಾಸ್ಟ್ ಆರೋಪಿ ತಹವ್ವೂರ್ ರಾಣಾನನ್ನು ಅಮೆರಿಕಾದಿಂದ ಇವತ್ತೇ ಭಾರತಕ್ಕೆ ಕರೆತರುವ ಸಾದ್ಯತೆ ಇದೆ.
ಅಮೆರಿಕಾದಿಂದ ತಹವ್ವೂರ್ ರಾಣಾ ಗಡಿಪಾರು ಮಾಡಿ ಆದೇಶ ಮಾಡಲಾಗಿತ್ತು. ಇದನ್ನು ಪ್ರಶ್ನಿಸಿ ಸಲ್ಲಿಸಿದ್ದ ಅರ್ಜಿಯನ್ನು ಅಮೆರಿಕ ಸುಪ್ರೀಂ ಕೋರ್ಟ್ ತಿರಸ್ಕಾರ ಮಾಡಿದೆ. ಹೀಗಾಗಿ ಇವತ್ತು ರಾಣಾ ಭಾರತಕ್ಕೆ ಬರುವ ಸಾಧ್ಯತೆಗಳಿವೆ. ಈಗಾಗಲೇ ದೇಶದ ವಿವಿಧ ಏಜೆನ್ಸಿಗಳ ತಂಡ ಅಮೆರಿಕ ತಲುಪಿದೆ. ಹಸ್ತಾಂತರ ಪ್ರಕ್ರಿಯೆಗೆ ಅಗತ್ಯವಿರೋ ಪತ್ರ ವ್ಯವಹಾರಗಳನ್ನು ಆರಂಭಿಸಲಾಗಿದ್ದು, ಎಲ್ಲವೂ ನಿಗದಿಯಂತೆ ನಡೆದರೆ ಇಂದೇ ರಾಣಾ ಭಾರತಕ್ಕೆ ಬರುವ ಸಾಧ್ಯತೆಗಳಿವೆ.
ರಾಣಾಗಾಗಿ ಸಿದ್ಧವಾಗಿವೆ ಎರಡು ಜೈಲು
ಅಮೆರಿಕದಿಂದ ಭಾರತಕ್ಕೆ ಬರುವ ರಾಣಾನನ್ನು ಬಂಧನದಲ್ಲಿಡಲು ಸಿದ್ಧತೆ ಆರಂಭವಾಗಿದೆ. ಕೆನಡಾ ನಾಗರಿಕನಾಗಿರುವ ರಾಣಾ ಭಾರತಕ್ಕೆ ಬರುತ್ತಿದ್ದಂತೆ ಎರಡು ಜೈಲುಗಳ ಪೈಕಿ ಒಂದರಲ್ಲಿರಿಸಲು ಪ್ಲ್ಯಾನ್ ಮಾಡಲಾಗುತ್ತಿದೆ. ಅತ್ಯಂತ ಸುರಕ್ಷಿತ ಜೈಲುಗಳಲ್ಲಿ ಒಂದರಲ್ಲಿ ರಾಣಾನನ್ನು ಇರಿಸಲು ಪ್ಲ್ಯಾನ್ ಮಾಡಲಾಗುತ್ತಿದೆ. ಈಗಾಗಲೇ ದೆಹಲಿ ಮತ್ತು ಮುಂಬೈನ ಜೈಲುಗಳನ್ನು ಅಂತಿಮಗೊಳಿಸಲಾಗಿದ್ದು, ಕೊನೆಯ ನಿರ್ಧಾರ ಆಗಬೇಕಿದೆ. ಆದರೆ, ಈ ಎರಡೂ ಜೈಲುಗಳಲ್ಲಿ ರಾಣಾನನ್ನು ಬಂಧಿಸಿಡಲು ಅಗತ್ಯವಿರುವ ಕ್ರಮಗಳಿಗೆ ಚಾಲನೆ ನೀಡಲಾಗಿದೆ.