ಟೆಲ್ ಅವಿವ್ : ಇಸ್ರೇಲ್ ಮತ್ತು ಗಾಜಾ ನಡುವಿನ ಎರಡು ವರ್ಷಗಳ ಸುದೀರ್ಘ ಯುದ್ಧದ ನಂತರ ಹಮಾಸ್ ಉಗ್ರರು ಇಸ್ರೇಲಿ ಒತ್ತೆಯಾಳುಗಳನ್ನು ಬಿಡುಗಡೆ ಮಾಡಿದ್ದು, ಟೆಲ್ ಅವೀವ್‌ನಲ್ಲಿ ಸಂಭ್ರಮ ಮನೆಮಾಡಿದೆ. ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮಧ್ಯಸ್ಥಿಕೆಯಲ್ಲಿ ನಡೆದ ಕದನ ವಿರಾಮ ಒಪ್ಪಂದದ ಭಾಗವಾಗಿ ಈ ಮಹತ್ವದ ಒತ್ತೆಯಾಳು-ಕೈದಿಗಳ ವಿನಿಮಯ ಪ್ರಕ್ರಿಯೆ ನಡೆದಿದೆ.
ಶಾಂತಿ ಒಪ್ಪಂದದ ಮೊದಲ ಹಂತವಾಗಿ 7 ಇಸ್ರೇಲಿ ಒತ್ತೆಯಾಳುಗಳನ್ನು ಹಮಾಸ್ ಇಂದು ರೆಡ್ ಕ್ರಾಸ್ ವಶಕ್ಕೆ ನೀಡಿದೆ. ಇಸ್ರೇಲಿ ಮಾಧ್ಯಮ ವರದಿಗಳ ಪ್ರಕಾರ, ಗಾಲಿ ಮತ್ತು ಝಿವ್ ಬರ್ಮನ್, ಮತನ್ ಆಂಗ್ರೆಸ್ಟ್, ಅಲೋನ್ ಓಹೆಲ್, ಓಮ್ರಿ ಮಿರಾನ್, ಐತಾನ್ ಮೋರ್ ಮತ್ತು ಗೈ ಗಿಲ್ಬೋವಾ-ದಲಾಲ್ ಬಿಡುಗಡೆಯಾದವರು. ಇವರ ಆರೋಗ್ಯ ಸ್ಥಿತಿಯ ಬಗ್ಗೆ ತಕ್ಷಣದ ಮಾಹಿತಿ ಲಭ್ಯವಾಗಿಲ್ಲವಾದರೂ, ದೇಶದಾದ್ಯಂತ ಸಾರ್ವಜನಿಕ ಸ್ಥಳಗಳಲ್ಲಿ ಈ ದೃಶ್ಯವನ್ನು ವೀಕ್ಷಿಸುತ್ತಿದ್ದ ಸಾವಿರಾರು ಇಸ್ರೇಲಿಗರು, ರೆಡ್ ಕ್ರಾಸ್ ಸಂಸ್ಥೆಯು ಒತ್ತೆಯಾಳುಗಳನ್ನು ಉತ್ತರ ಗಾಜಾ ಪಟ್ಟಿಯಿಂದ ಕರೆತರುತ್ತಿದ್ದಂತೆ ಹರ್ಷೋದ್ಗಾರ ವ್ಯಕ್ತಪಡಿಸಿದರು.
“ಕೈದಿಗಳ ವಿನಿಮಯ ನಿರೀಕ್ಷೆ”
ಇನ್ನೊಂದೆಡೆ, ಪ್ಯಾಲೆಸ್ತೀನಿಯರು ಇಸ್ರೇಲ್‌ನ ಜೈಲುಗಳಲ್ಲಿರುವ ನೂರಾರು ಕೈದಿಗಳ ಬಿಡುಗಡೆಗಾಗಿ ಕಾಯುತ್ತಿದ್ದಾರೆ. ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಮಧ್ಯಸ್ಥಿಕೆಯಿಂದ ಈ ಕದನ ವಿರಾಮ ಸಾಧ್ಯವಾಗಿದೆ. ಈ ಒಪ್ಪಂದ ಮತ್ತು ಯುದ್ಧಾನಂತರದ ಯೋಜನೆಗಳ ಬಗ್ಗೆ ಚರ್ಚಿಸಲು ಟ್ರಂಪ್ ಮತ್ತು ಇತರ ನಾಯಕರು ಈ ಪ್ರದೇಶಕ್ಕೆ ಆಗಮಿಸುತ್ತಿದ್ದಾರೆ. ಒತ್ತೆಯಾಳುಗಳ ಬಿಡುಗಡೆಯೊಂದಿಗೆ, ಯುದ್ಧದಿಂದ ಸಂಪೂರ್ಣವಾಗಿ ನಾಶವಾಗಿರುವ ಗಾಜಾದ ಭವಿಷ್ಯದ ಬಗ್ಗೆ ಪ್ರಶ್ನೆಗಳು ಎದ್ದಿವೆ. ಕ್ಷಾಮದಿಂದ ತತ್ತರಿಸಿರುವ ಗಾಜಾದಲ್ಲಿ ಲಕ್ಷಾಂತರ ಜನರು ನಿರಾಶ್ರಿತರಾಗಿದ್ದು, ಇದೀಗ ಮಾನವೀಯ ನೆರವಿನ ಮಹಾಪೂರವೇ ಹರಿದುಬರುವ ನಿರೀಕ್ಷೆಯಿದೆ.
ಇನ್ನೊಂದೆಡೆ ಒತ್ತೆಯಾಳುಗಳ ವಾಪಸಾತಿಯು ಇಸ್ರೇಲ್‌ನ ಪಾಲಿಗೆ ಒಂದು ನೋವಿನ ಅಧ್ಯಾಯವನ್ನು ಕೊನೆಗೊಳಿಸಿದೆ. ಅಕ್ಟೋಬರ್ 2023ರಲ್ಲಿ ಹಮಾಸ್ ದಾಳಿ ನಡೆಸಿ ಇವರನ್ನು ಅಪಹರಿಸಿದ ದಿನದಿಂದಲೂ, ಇಸ್ರೇಲ್‌ನಲ್ಲಿ ಪ್ರತಿದಿನ ಅವರ ಬಂಧನದ ದಿನಗಳನ್ನು ನೆನಪಿಸಲಾಗುತ್ತಿತ್ತು. ಜನರು ಹಳದಿ ಪಿನ್‌ಗಳು ಮತ್ತು ರಿಬ್ಬನ್‌ಗಳನ್ನು ಧರಿಸಿ ಒಗ್ಗಟ್ಟು ಪ್ರದರ್ಶಿಸುತ್ತಿದ್ದರು. ಅವರ ಬಿಡುಗಡೆಗಾಗಿ ಆಗ್ರಹಿಸಿ ಕುಟುಂಬಸ್ಥರು ನಡೆಸುತ್ತಿದ್ದ ಸಾಪ್ತಾಹಿಕ ಪ್ರತಿಭಟನೆಗಳಲ್ಲಿ ಲಕ್ಷಾಂತರ ಜನರು ಭಾಗವಹಿಸುತ್ತಿದ್ದರು. ಯುದ್ಧ ಮುಂದುವರಿದಂತೆ, ಪ್ರಧಾನಿ ಬೆಂಜಮಿನ್ ನೆತನ್ಯಾಹು ಅವರು ರಾಜಕೀಯ ಕಾರಣಗಳಿಗಾಗಿ ವಿಳಂಬ ಮಾಡುತ್ತಿದ್ದಾರೆ ಎಂದು ಪ್ರತಿಭಟನಾಕಾರರು ಆರೋಪಿಸಿದ್ದರು. ಅಂತಿಮವಾಗಿ, ತೀವ್ರ ಅಂತಾರಾಷ್ಟ್ರೀಯ ಒತ್ತಡಕ್ಕೆ ಮಣಿದು ಕಳೆದ ವಾರ ಕದನ ವಿರಾಮಕ್ಕೆ ಒಪ್ಪಿಗೆ ಸೂಚಿಸಲಾಗಿತ್ತು.
ಬಿಡುಗಡೆಯಾದ ಒತ್ತೆಯಾಳುಗಳನ್ನು ಮೊದಲು ಅಂತಾರಾಷ್ಟ್ರೀಯ ರೆಡ್ ಕ್ರಾಸ್ ಸಮಿತಿಗೆ, ನಂತರ ಇಸ್ರೇಲಿ ಸೇನೆಗೆ ಹಸ್ತಾಂತರಿಸಲಾಗುತ್ತದೆ. ಅಲ್ಲಿಂದ ಅವರನ್ನು ರೇಮ್ ಸೇನಾ ನೆಲೆಗೆ ಕರೆದೊಯ್ದು ಕುಟುಂಬ ಸದಸ್ಯರೊಂದಿಗೆ ಮತ್ತೆ ಸೇರಿಸಲಾಗುತ್ತದೆ. ಇದೇ ಸಮಯದಲ್ಲಿ ಮೃತಪಟ್ಟಿರುವ ಸುಮಾರು 28 ಒತ್ತೆಯಾಳುಗಳ ಅವಶೇಷಗಳನ್ನು ಹಸ್ತಾಂತರಿಸುವ ಸಾಧ್ಯತೆ ಕಡಿಮೆ. 72 ಗಂಟೆಗಳ ಒಳಗೆ ಹಿಂತಿರುಗಿಸದ ಮೃತ ಒತ್ತೆಯಾಳುಗಳನ್ನು ಪತ್ತೆಹಚ್ಚಲು ಅಂತಾರಾಷ್ಟ್ರೀಯ ಕಾರ್ಯಪಡೆಯೊಂದು ಕೆಲಸ ಮಾಡಲಿದೆ ಎಂದು ಇಸ್ರೇಲ್‌ನ ಸಂಯೋಜಕ ಗಲ್ ಹಿರ್ಷ್ ತಿಳಿಸಿದ್ದಾರೆ.
ಇನ್ನೂ ಪ್ಯಾಲೆಸ್ತೀನಿಯನ್ ಕೈದಿಗಳ ಬಿಡುಗಡೆಯ ಸಮಯವನ್ನು ಪ್ರಕಟಿಸಲಾಗಿಲ್ಲ. ಇವರಲ್ಲಿ ಇಸ್ರೇಲಿಗರ ಮೇಲೆ ದಾಳಿ ನಡೆಸಿದ ಆರೋಪದ ಮೇಲೆ ಜೀವಾವಧಿ ಶಿಕ್ಷೆ ಅನುಭವಿಸುತ್ತಿರುವ 250 ಮಂದಿ ಮತ್ತು ಯುದ್ಧದ ಸಮಯದಲ್ಲಿ ಗಾಜಾದಿಂದ ಬಂಧಿಸಲ್ಪಟ್ಟ 1,700 ಮಂದಿ ಸೇರಿದ್ದಾರೆ. ಇವರನ್ನು ವೆಸ್ಟ್ ಬ್ಯಾಂಕ್ ಅಥವಾ ಗಾಜಾಗೆ ವಾಪಸ್ ಕಳುಹಿಸಲಾಗುವುದು ಅಥವಾ ಗಡಿಪಾರು ಮಾಡಲಾಗುವುದು. ಇಸ್ರೇಲ್ ಈ ಕೈದಿಗಳನ್ನು ‘ಭಯೋತ್ಪಾದಕರು’ ಎಂದು ಪರಿಗಣಿಸಿದರೆ, ಪ್ಯಾಲೆಸ್ತೀನಿಯರು ಅವರನ್ನು ‘ಇಸ್ರೇಲಿ ಆಕ್ರಮಣದ ವಿರುದ್ಧದ ಸ್ವಾತಂತ್ರ್ಯ ಹೋರಾಟಗಾರರು’ ಎಂದು ನೋಡುತ್ತಾರೆ. ಕೈದಿಗಳ ಬಿಡುಗಡೆಯ ನಂತರ ಸಂಭ್ರಮಾಚರಣೆ ನಡೆಸದಂತೆ ವೆಸ್ಟ್ ಬ್ಯಾಂಕ್‌ನಲ್ಲಿರುವ ಪ್ಯಾಲೆಸ್ತೀನಿಯರಿಗೆ ಇಸ್ರೇಲ್ ಎಚ್ಚರಿಕೆ ನೀಡಿದೆ ಎಂದು ವರದಿಯಾಗಿದೆ.