ವಾಷಿಂಗ್ಟನ್: ಅಮೆರಿಕದಲ್ಲಿ ಈಗಷ್ಟೇ ಚುನಾವಣೆ ಮುಗಿದಿದೆ. ಈ ಮಧ್ಯೆ ಆಘಾತಕಾರಿ ಸಂಗತಿಯೊಂದು ಬೆಳಕಿಗೆ ಬಂದಿದ್ದು, ಇರಾನ್ ಡೊನಾಲ್ಡ್ ಟ್ರಂಪ್ ಹತ್ಯೆಗೆ ಸಂಚು ರೂಪಿಸಿತ್ತು ಎಂಬ ವಿಷಯ ಬಹಿರಂಗವಾಗಿದೆ.
ಈಗಾಗಲೇ ಅಮೆರಿಕಕ್ಕೆ ಚುನಾಯಿತ ಅಧ್ಯಕ್ಷರಾಗಿ ಡೊನಾಲ್ಡ್ ಟ್ರಂಪ್ ಆಯ್ಕೆಯಾಗಿದ್ದಾರೆ. ಆದರೆ, ಈ ಸಂಚನ್ನು ಅಮೆರಿಕದ ಫೆಡರಲ್ ಬ್ಯೂರೋ ಆಫ್ ಇನ್ವೆಸ್ಟಿಗೇಷನ್ (ಎಫ್ಬಿಐ) ವಿಫಲಗೊಳಿಸಿತ್ತು ಎನ್ನಲಾಗಿದೆ.
ಟ್ರಂಪ್ ಹತ್ಯೆಯ ಸಂಚಿಗೆ ಸಂಬಂಧಿಸಿದಂತೆ ಯುನೈಟೆಡ್ ಸ್ಟೇಟ್ಸ್ ಇರಾನಿನ ವ್ಯಕ್ತಿಯೊಬ್ಬರ ಮೇಲೆ ಆರೋಪ ಹೊರಿಸಿದೆ ಎಂದು ನ್ಯಾಯಾಂಗ ಇಲಾಖೆ ಹೇಳಿದೆ. ಆರೋಪಿ ಫರ್ಹಾದ್ ಶಕೇರಿ ಈ ಕುರಿತು ಹೇಳಿದ್ದು, ಅಕ್ಟೋಬರ್ 7ರಂದು ಟ್ರಂಪ್ ರನ್ನು ಕೊಲ್ಲುವ ಕಂಟ್ರಾಕ್ಟ್ ನೀಡಲಾಗಿತ್ತು ಎಂದು ಕಾನೂನು ಜಾರಿ ಅಧಿಕಾರಿಗಳಿಗೆ ಹೇಳಿದ್ದಾನೆ. ಇದಕ್ಕಾಗಿ 5 ಲಕ್ಷ ಡಾಲರ್ ನೀಡುವುದಾಗಿ ಹೇಳಿದ್ದರು ಎಂದು ಆತ ಹೇಳಿದ್ದಾರೆ.
ಈ ಶಕೇರಿ ಓರ್ವ ಕಂಟ್ರಾಕ್ಟ್ ಕಿಲ್ಲರ್ ಆಗಿದ್ದು, ಇರಾನ್ ನಲ್ಲಿ ವಾಸವಾಗಿದ್ದಾನೆ. 51 ವರ್ಷದ ಶಕೇರಿ ಬಾಲ್ಯದಲ್ಲಿ ಅಮೆರಿಕಕ್ಕೆ ವಲಸೆ ಬಂದಿದ್ದ. ಆದರೆ, ದರೋಡೆ ಅಪರಾಧದ ನಂತರ 2008ರಲ್ಲಿ ಗಡಿಪಾರು ಮಾಡಲಾಗಿತ್ತು. ರೆವಲ್ಯೂಷನರಿ ಗಾರ್ಡ್ ಅಧಿಕಾರಿಯೊಬ್ಬರು ಈ ಹತ್ಯೆಯ ಸಂಚಿನ ಕಂಟ್ರಾಕ್ಟ್ ಕೊಟ್ಟಿದ್ದರು ಎನ್ನಲಾಗಿದೆ.
ಇದೇ ವರ್ಷ ಜುಲೈ 13ರಂದು ಪೆನ್ಸಿಲ್ವೇನಿಯಾದಲ್ಲಿ ಚುನಾವಣಾ ಪ್ರಚಾರದ ವೇಳೆ ಡೊನಾಲ್ಡ್ ಟ್ರಂಪ್ ಮೇಲೆ ಗುಂಡಿನ ದಾಳಿ ನಡೆದಿತ್ತು. ಆ ಗುಂಡು ಅವರ ಕಿವಿಯನ್ನು ಸೀಳಿ ಹೋಗಿತ್ತು. ಅವರು ಪ್ರಾಣಾಪಾಯದಿಂದ ಪಾರಾಗಿದ್ದರು. ಆನಂತರ ಮತ್ತೊಮ್ಮೆ ಅವರ ಮೇಲೆ ದಾಳಿ ನಡೆದಿತ್ತು.