ಬೆಂಗಳೂರು: ಮಾಜಿ ಸಂಸದ ಪ್ರಜ್ವಲ್ ರೇವಣ್ಣ ವಿರುದ್ಧ ಅವಹೇಳನಾಕಾರಿ ಹೇಳಿಕೆ ನೀಡಿದ್ದ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ವಿರುದ್ಧ ಪ್ರಕರಣ ದಾಖಲಾಗಿತ್ತು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಕೋರ್ಟ್ ನಲ್ಲಿ ವಿಚಾರಣೆ ನಡೆಯುತ್ತಿದ್ದು, ಸೆ. 21ಕ್ಕೆ ವಿಚಾರಣೆ ಮುಂದೂಡಲಾಗಿದೆ.
ಮಾಜಿ ಸಂಸದ ಪ್ರಜ್ವಲ್ ರೇವಣ್ಣ ಸಾಮೂಹಿಕ ಅತ್ಯಾಚಾರಿ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಹೇಳಿದ್ದರು. ಇದನ್ನು ವಿರೋಧಿಸಿ ಅವರ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ನಿರ್ದೇಶನ ಕೋರಿ ಸಲ್ಲಿಸಿಕೆಯಾಗಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯ ವಿಚಾರಣೆಯನ್ನು ಈಗ ಮುಂದೂಡಲಾಗಿದೆ.
ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಅಖಿಲ ಭಾರತ ದಲಿತ ಕ್ರಿಯಾ ಸಮಿತಿಯ ಅಧ್ಯಕ್ಷ ಚಿ.ನಾ.ರಾಮು ಮತ್ತು ರಾಷ್ಟ್ರೀಯ ಮಹಿಳಾ ಘಟಕದ ಅಧ್ಯಕ್ಷೆ ಸುಶೀಲಾ ದೇವರಾಜ್ ಸಲ್ಲಿಸಿದ್ದ ಅರ್ಜಿಯನ್ನು ಮುಖ್ಯ ನ್ಯಾಯಮೂರ್ತಿ ಎನ್.ವಿ ಅಂಜಾರಿಯಾ ಮತ್ತು ನ್ಯಾಯಮೂರ್ತಿ ಕೆ.ವಿ ಅರವಿಂದ ಅವರ ವಿಭಾಗೀಯ ಪೀಠ ವಿಚಾರಣೆ ನಡೆಸಿದೆ.
ಅರ್ಜಿದಾರರ ಪರ ವಕೀಲರು, ಚುನಾವಣಾ ಪ್ರಚಾರದ ಸಂದರ್ಭದಲ್ಲಿ ರಾಹುಲ್ ಗಾಂಧಿಪ್ರಜ್ವಲ್ ರೇವಣ್ಣ ಹಲವು ಮಹಿಳೆಯರ ಮೇಲೆ ಅತ್ಯಾಚಾರವೆಸಗಿದ್ದಾರೆ ಎಂದು ಅವರನ್ನು ಸಾಮೂಹಿಕ ಅತ್ಯಾಚಾರಿ ಎಂದು ಕರೆದಿದ್ದಾರೆ. ಈ ಹೇಳಿಕೆಯಿಂದಾಗಿ ಸ್ಥಳೀಯ ಮಹಿಳೆಯರನ್ನು ಅವಮಾನಿಸಿದಂತಾಗಿದೆ. ಇಂತಹ ಹೇಳಿಕೆಯಿಂದಾಗಿ ಹಾಸನದ ಭಾಗದ ಪ್ರತಿ ಮನೆಗಳಲ್ಲಿಯೂ ಮಹಿಳೆಯರನ್ನು ಸಂಶಯದಿಂದ ಕಾಣುವ ಪರಿಸ್ಥಿತಿ ಎದುರಾಗಿದೆ. ಹೀಗಾಗಿ ಪ್ರಕರಣವನ್ನು ತುರ್ತು ಕೈಗೆತ್ತಿಕೊಳ್ಳುವಂತೆ ಕೋರಲಾಗಿತ್ತು.