ನವದೆಹಲಿ: ಭಾರತದ ವಿರುದ್ಧದ ಪಂದ್ಯದಲ್ಲಿಯೂ ಬ್ಯಾಟಿಂಗ್ ವೈಫಲ್ಯ ಎದುರಿಸಿದ ಪಾಕಿಸ್ತಾನ ತಂಡದ ಆರಂಭಿಕ ಬ್ಯಾಟರ್ ಬಾಬರ್ ಆಝಮ್ ವಿರುದ್ಧ ಮಾಜಿ ವೇಗಿ ಶೋಯೆಬ್ ಅಖ್ತರ್ ಆಕ್ರೋಶ ಕಿಡಿ ಕಾರಿದ್ದಾರೆ. ಭಾನುವಾರ ನಡೆದಿದ್ದ ಐಸಿಸಿ ಚಾಂಪಿಯನ್ಸ್ ಟ್ರೋಫಿ ಪಂದ್ಯದಲ್ಲಿ 26 ಎಸೆತಗಳನ್ನು ಆಡಿದ್ದ ಆಝಮ್, 23 ರನ್ಗಳನ್ನು ರನ್ ಪಾಂಡ್ಯ ಎಸೆತದಲ್ಲಿ ವಿಕೆಟ್ ಒಪ್ಪಿಸಿದ್ದರು.
ತಂಡ ಸಂಪೂರ್ಣವಾಗಿ ವೈಫಲ್ಯ ಕಂಡ ಕಾರಣ 6 ವಿಕೆಟ್ಗಳಿಂದ ಭಾರತ ತಂಡ ಸೋಲು ಕಂಡಿತ್ತು. ಇದೀಗ ತಮ್ಮ ಅಧಿಕೃತ ಎಕ್ಸ್ ಖಾತೆಯಲ್ಲಿ ಅಪ್ಲೋಡ್ ಮಾಡಿರುವ ವಿಡಿಯೊದಲ್ಲಿ ಮಾತನಾಡಿದ ಶೋಯೆಬ್ ಅಖ್ತರ್, “ನಾವು ಬಾಬರ್ ಅಜಮ್ನನ್ನು ಕೊಹ್ಲಿಗೆ ಹೋಲಿಕೆ ಮಾಡುತ್ತೇವೆ. ಆದರೆ, ಕೊಹ್ಲಿ ಎಲ್ಲಿ, ಅಜಮ್ ಎಲ್ಲಿ? ಸಚಿನ್ ತೆಂಡೂಲ್ಕರ್ 100 ಶತಕಗಳನ್ನು ಸಿಡಿಸಿದ್ದಾರೆ. ಅದೇ ರೀತಿ ಕೊಹ್ಲಿ ಚೇಸಿಂಗ್ನಲ್ಲಿ ಮಾಸ್ಟರ್. ಅವರಿಗೂ ಬಾಬರ್ಗೂ ಏನು ಹೋಲಿಕೆ, ಎಂದು ಪ್ರಶ್ನಿಸಿದ್ದಾರೆ.
“ಬಾಬರ್ ವಿಚಾರದಲ್ಲಿ ಆರಂಭದಿಂದಲೇ ಮೋಸ ಹೋಗಿದ್ದೇವೆ. ಪಾಕಿಸ್ತಾನ ಕ್ರಿಕೆಟ್ ತಂಡದ ಬಗ್ಗೆ ಮಾತನಾಡಲು ಕೂಡ ನನಗೆ ಇಷ್ಟವಿಲ್ಲ. ನಾನು ಈ ಕೆಲಸವನ್ನು ಮಾಡುತ್ತಿರುವುದು ಕೇವಲ ಹಣಕ್ಕಾಗಿ ಮಾತ್ರ,” ಎಂದು ಮಾಜಿ ವೇಗಿ ತಿಳಿಸಿದ್ದಾರೆ.
ಇದೇ ವೇಳೆ ವೃತ್ತಿ ಜೀವನದ 51ನೇ ಶತಕ ಸಿಡಿಸಿದ ವಿರಾಟ್ ಕೊಹ್ಲಿಯನ್ನು ಶೋಯೆಬ್ ಅಖ್ತರ್ ಗುಣಗಾನ ಮಾಡಿದ್ದಾರೆ. “ವಿರಾಟ್ ಕೊಹ್ಲಿಯ ಈ ಆಟವನ್ನು ನಾವು ಈ ಹಿಂದೆ ನೋಡಿದ್ದೇವೆ. ಪಾಕಿಸ್ತಾನ ವಿರುದ್ಧ ಆಡುವಾಗ ಕೊಹ್ಲಿ ಶತಕ ಬಾರಿಸುವುದು ಗ್ಯಾರಂಟಿ ಎಂದು ಹೇಳಬಹುದು. ಅವರು ಆಧುನಿಕ ಕ್ರಿಕೆಟ್ನ ದಿಗ್ಗಜ! ಇದರಲ್ಲಿ ಯಾವುದೇ ಅನುಮಾನವಿಲ್ಲ,” ಎಂದು ಶೋಯೆಬ್ ಅಖ್ತರ್ ಹೊಗಳಿದ್ದಾರೆ.
ಪಾಕ್ ಟೀಮ್ ಮ್ಯಾನೇಜ್ಮೆಂಟ್ಗೆ ಬುದ್ದಿ ಇಲ್ಲ: ಅಖ್ತರ್
ಭಾರತದ ವಿರುದ್ಧ ಪಾಕಿಸ್ತಾನ ಆಡಿಸಿದ್ದ ಪ್ಲೇಯಿಂಗ್ XI ಬಗ್ಗೆ ಶೋಯೆಬ್ ಅಖ್ತರ್ ಟೀಕಿಸಿದ್ದಾರೆ ಹಾಗೂ ಪಾಕ್ ಟೀಮ್ಮ್ಯಾನೇಜ್ಮೆಂಟ್ಗೆ ಬುದ್ದಿ ಇಲ್ಲವೆಂದು ದೂರಿದಿದ್ದಾರೆ. “ಟೀಮ್ ಇಂಡಿಯಾ ಎದುರು ಪಾಕಿಸ್ತಾನದ ಸೋಲು ಆಶ್ಚರ್ಯ ತಂದಿಲ್ಲ. ಏಕೆಂದರೆ ಈ ಫಲಿತಾಂಶಗಳು ಬಗ್ಗೆ ನನಗೆ ಮೊದಲೇ ಗೊತ್ತಿತ್ತು. ಪಾಕಿಸ್ತಾನ ಹೆಚ್ಚಿನ ಆಲ್ರೌಂಡರ್ಗಳನ್ನು ಆಡಿಸಿದೆ. ತಂಡದಲ್ಲಿ ಯಾವ ಆಟಗಾರರನ್ನು ಆಡಿಸಬೇಕು ಮತ್ತು ಯಾರನ್ನು ಆಡಿಸಬಾರದೆಂದು ಅವರಿಗೆ ತಿಳಿದಿಲ್ಲ. ಅಂದ ಹಾಗೆ ಪಾಕಿಸ್ತಾನ ಟೀಮ್ ಮ್ಯಾನೇಜ್ಮೆಂಟ್ಗೆ ಬುದ್ದಿ ಇಲ್ಲ,” ಎಂದು ಶೋಯೆಬ್ ಅಖ್ತರ್ ಕಿಡಿಕಾರಿದ್ದಾರೆ.