ನವದೆಹಲಿ: ಭಾರತ ಮತ್ತು ಇಂಗ್ಲೆಂಡ್ ನಡುವಣ ಐದು ಪಂದ್ಯಗಳ ಟೆಸ್ಟ್ ಸರಣಿಯು ಜೂನ್ 20 ರಂದು ಆರಂಭವಾಗಲಿದೆ. ಈ ಮಹತ್ವದ ಟೆಸ್ಟ್ ಸರಣಿಗಾಗಿ ಎರಡೂ ತಂಡಗಳು ಬಿರುಸಿನ ಸಿದ್ಧತೆಯಲ್ಲಿ ತೊಡಗಿವೆ. ಆದರೆ, ಶುಭಮನ್ ಗಿಲ್ ನಾಯಕತ್ವದ ಟೀಮ್ ಇಂಡಿಯಾಕ್ಕೆ ಈಗ ಗಾಯದ ಆತಂಕ ಎದುರಾಗಿದೆ. ತಂಡದ ವಿಕೆಟ್ ಕೀಪರ್-ಬ್ಯಾಟ್ಸ್‌ಮನ್ ರಿಷಭ್ ಪಂತ್ ಅವರು ಅಭ್ಯಾಸದ ವೇಳೆ ಗಾಯಗೊಂಡಿದ್ದು, ಮೊದಲ ಟೆಸ್ಟ್ ಪಂದ್ಯಕ್ಕೂ ಮುನ್ನ ಭಾರತ ತಂಡಕ್ಕೆ ಹಿನ್ನಡೆಯಾಗುವ ಸಾಧ್ಯತೆ ಇದೆ ಎಂದು ವರದಿಯಾಗಿದೆ.
ರೋಹಿತ್ ಶರ್ಮಾ ಮತ್ತು ವಿರಾಟ್ ಕೊಹ್ಲಿ ಟೆಸ್ಟ್ ಕ್ರಿಕೆಟ್‌ಗೆ ನಿವೃತ್ತಿ ಘೋಷಿಸಿರುವ ಕಾರಣ, ರಿಷಭ್ ಪಂತ್ ಬ್ಯಾಟಿಂಗ್‌ನಲ್ಲಿ ಭಾರತ ತಂಡದ ಪ್ರಮುಖ ಆಟಗಾರರಾಗಿದ್ದಾರೆ. ಹೀಗಾಗಿ ಅವರ ಗಾಯದ ಭೀತಿ ತಂಡದ ನಿರ್ವಹಣೆಗೆ ತಲೆನೋವಾಗಿ ಪರಿಣಮಿಸಿದೆ.
ಶುಭಮನ್ ಗಿಲ್ ಭಾರತ ತಂಡದ ನಾಯಕನಾಗಿದ್ದು, ರಿಷಭ್ ಪಂತ್‌ಗೆ ಉಪನಾಯಕತ್ವ ನೀಡಲಾಗಿದೆ. ಪಂತ್ ವೈಟ್‌ಬಾಲ್ ಕ್ರಿಕೆಟ್‌ನಲ್ಲಿ ಹೇಳಿಕೊಳ್ಳುವಂತಹ ಫಾರ್ಮ್‌ನಲ್ಲಿಲ್ಲದಿದ್ದರೂ, ಟೆಸ್ಟ್ ಕ್ರಿಕೆಟ್‌ನಲ್ಲಿ ಉತ್ತಮ ದಾಖಲೆಯನ್ನು ಹೊಂದಿದ್ದಾರೆ. ಇಂಗ್ಲೆಂಡ್ ನೆಲದಲ್ಲಿ ತಮ್ಮ ಚೊಚ್ಚಲ ಶತಕವನ್ನೂ ಅವರು ಬಾರಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಅವರ ಗಾಯದ ಸುದ್ದಿ ಟೀಮ್ ಇಂಡಿಯಾಗೆ ಭಾರಿ ಹಿನ್ನಡೆಯಾಗಿದೆ.
ರಿಷಭ್ ಪಂತ್‌ಗೆ ಏನಾಗಿದೆ?
ಭಾರತ ತಂಡದ ಅಭ್ಯಾಸದ ವೇಳೆ ರಿಷಭ್ ಪಂತ್ ದೊಡ್ಡ ಗಾಯದಿಂದ ಅದೃಷ್ಟವಶಾತ್ ತಪ್ಪಿಸಿಕೊಂಡಿದ್ದಾರೆ. ಬೆಕೆನ್‌ಹ್ಯಾಮ್‌ನಲ್ಲಿ ಅಭ್ಯಾಸ ನಡೆಸುತ್ತಿದ್ದಾಗ ಅವರ ಎಡಗೈಗೆ ಚೆಂಡು ಬಲವಾಗಿ ಬಡಿಯಿತು. ಆದರೂ, ಪಂತ್‌ಗೆ ಯಾವುದೇ ಗಂಭೀರ ಗಾಯವಾಗಿಲ್ಲ ಮತ್ತು ಅವರು ಸಂಪೂರ್ಣವಾಗಿ ಫಿಟ್ ಆಗಿದ್ದಾರೆ ಎಂದು ತಂಡದ ವೈದ್ಯರು ಹೇಳಿದ್ದಾರೆ ಎಂದು ರೆವ್‌ಸ್ಪೋರ್ಟ್ಸ್ ವರದಿ ಮಾಡಿದೆ.
ಅಭ್ಯಾಸ ಪಂದ್ಯದಲ್ಲಿ ಕೆಎಲ್ ರಾಹುಲ್ ಮಿಂಚು
ಇಂಗ್ಲೆಂಡ್ ಲಯನ್ಸ್ ವಿರುದ್ಧದ ಎರಡನೇ ಅನಧಿಕೃತ ಟೆಸ್ಟ್ ಪಂದ್ಯದಲ್ಲಿ ಕೆಎಲ್ ರಾಹುಲ್ ಮಿಂಚಿನ ಬ್ಯಾಟಿಂಗ್ ಪ್ರದರ್ಶನ ನೀಡಿದ್ದಾರೆ. ಅವರು ಮೊದಲ ಇನ್ನಿಂಗ್ಸ್‌ನಲ್ಲಿ ಶತಕ ಗಳಿಸಿದ್ದು, ಎರಡನೇ ಇನ್ನಿಂಗ್ಸ್‌ನಲ್ಲಿ 51 ರನ್‌ಗಳನ್ನು ಕಲೆ ಹಾಕಿದ್ದಾರೆ. ಕೊಹ್ಲಿ ಮತ್ತು ರೋಹಿತ್ ಶರ್ಮಾ ಅನುಪಸ್ಥಿತಿಯಲ್ಲಿ, ಕೆಎಲ್ ರಾಹುಲ್ ಭಾರತ ತಂಡದ ಅತ್ಯಂತ ಅನುಭವಿ ಬ್ಯಾಟ್ಸ್‌ಮನ್ ಆಗಿದ್ದಾರೆ. ಹಾಗಾಗಿ ಅಭ್ಯಾಸ ಪಂದ್ಯದಲ್ಲಿ ರನ್ ಗಳಿಸಿರುವುದು ಟೀಮ್ ಇಂಡಿಯಾಗೆ ಶುಭ ಸಂಕೇತವಾಗಿದೆ.
ಕೆಎಲ್ ರಾಹುಲ್‌ಗೆ ಯಾವ ಕ್ರಮಾಂಕ?
ಕೆಎಲ್ ರಾಹುಲ್ ಟೆಸ್ಟ್ ಕ್ರಿಕೆಟ್‌ನಲ್ಲಿ ಅತ್ಯಂತ ಕೌಶಲ್ಯಭರಿತ ಬ್ಯಾಟ್ಸ್‌ಮನ್. ಅವರು ಟೆಸ್ಟ್ ಕ್ರಿಕೆಟ್‌ನಲ್ಲಿ ರೋಹಿತ್ ಶರ್ಮಾ ಜೊತೆ ಹಲವು ಬಾರಿ ಇನ್ನಿಂಗ್ಸ್ ಆರಂಭಿಸಿದ್ದಾರೆ. ಈಗ ರೋಹಿತ್ ಶರ್ಮಾ ಅನುಪಸ್ಥಿತಿಯಲ್ಲಿ, ಯಶಸ್ವಿ ಜೈಸ್ವಾಲ್ ಜೊತೆ ಇನ್ನಿಂಗ್ಸ್ ಆರಂಭಿಸಲು ಕೆಎಲ್ ರಾಹುಲ್‌ಗೆ ಅವಕಾಶ ಸಿಗಬಹುದು. ಇದರಿಂದ ಶುಭಮನ್ ಗಿಲ್ ಎಂದಿನಂತೆ ಮೂರನೇ ಕ್ರಮಾಂಕದಲ್ಲಿ ಆಡಿದರೆ, ನಾಲ್ಕನೇ ಕ್ರಮಾಂಕದಲ್ಲಿ ಮತ್ತೊಬ್ಬ ಕನ್ನಡಿಗ ಕರುಣ್ ನಾಯರ್ ಆಡುವ ಮೂಲಕ ವಿರಾಟ್ ಕೊಹ್ಲಿಯ ಸ್ಥಾನವನ್ನು ತುಂಬಬಹುದು.