ಸ್ಯಾಂಡಲ್ ವುಡ್ ಗೆ ಒಳ್ಳೆಯದಾಗಲಿ ಎಂಬ ನಿಟ್ಟಿನಲ್ಲಿ ಬೆಂಗಳೂರಿನ ಚಾಮರಾಜಪೇಟೆಯಲ್ಲಿನ ಕಲಾವಿದರ ಸಂಘದ ಕಟ್ಟಡದಲ್ಲಿ ಪೂಜೆ, ಹೋಮ ನಡೆಯುತ್ತಿದೆ. ಈ ಸಂದರ್ಭದಲ್ಲಿ ಬಹುತೇಕ ತಾರಾಗಣವೇ ಅಲ್ಲಿ ಭಾಗವಹಿಸಿತ್ತು. ನಟ ಜಗ್ಗೇಶ್ ಕೂಡ ಬಂದಿದ್ದರು. ಸಹಜವಾಗಿ ದರ್ಶನ್ ಹೆಸರು ಅಲ್ಲಿ ಕೇಳಿ ಬಂದಿತು. ಅದಕ್ಕೆ ಜಗ್ಗೇಶ್ ಉತ್ತರ ನೀಡಿದ್ದಾರೆ.
ನಟ ದರ್ಶನ್ ಕೊಲೆ ಆರೋಪದಲ್ಲಿ ಜೈಲು ಸೇರಿರುವುದು ಕನ್ನಡ ಚಿತ್ರರಂಗದ ಪಾಲಿಗೆ ಬೇಸರದ ಸಂಗತಿ. ಈಗ ದರ್ಶನ್ ಕಾನೂನು ಸಂಕಷ್ಟಕ್ಕೆ ಸಿಲುಕಿದ್ದಾರೆ. ಅವರು ಪಾರಾಗಲಿ ಎಂದು ಕಲಾವಿದರ ಸಂಘದಲ್ಲಿ ಪೂಜೆ, ಹೋಮ ಮಾಡಲಾಗಿದೆ ಎಂಬ ಅನುಮಾನ ಕೆಲವರಿಗೆ ಇತ್ತು. ಆದರೆ, ಇದಕ್ಕೆ ಜಗ್ಗೇಶ್ ಉತ್ತರ ಕೊಟ್ಟಿದ್ದಾರೆ.
ನನಗೂ ಆರಂಭದಲ್ಲಿ ಅದೇ ರೀತಿ ಮಾಹಿತಿ ಬಂತು. ದರ್ಶನ್ ಗಾಗಿ ಪೂಜೆ ಆಗಿದ್ದರೆ ನಾನು ಕೂಡ ಬರುತ್ತಿರಲಿಲ್ಲ. ಅದು ಬೇರೆ ಆಯಾಮ ಪಡೆದುಕೊಳ್ಳುತ್ತಿತ್ತು. ಆದರೆ, ಇಲ್ಲಿ ಪೂಜೆ ನಡೆಯುತ್ತಿರುವ ಕಾರಣವೇ ಬೇರೆ. ಇಲ್ಲಿ ಕಲಾವಿದರ ಒಳಿತಿಗಾಗಿ ಈ ಪೂಜೆ ನಡೆದಿದೆ. ಕೆಲವರಿಗೆ ಮಾಹಿತಿ ಕೊರತೆ ಆಗಿರಬಹುದು. ನನಗೆ ಅನುಮಾನ ಬಂದಾಗ ವಿಚಾರಿಸಿದ್ದೇನೆ. ಆನಂತರ ಎಲ್ಲವೂ ಗೊತ್ತಾಯಿತು ಎಂದು ಹೇಳಿದ್ದಾರೆ.
ನಾಗದೇವರು ಸಲಹೆ ನೀಡಿದೆ. ತಂದೆ-ತಾಯಿ ಮುಂದಿನ ಪೀಳಿಗೆಗೆ ಬುದ್ಧಿ ಹೇಳುವ ರೀತಿ ಒಗ್ಗಟ್ಟಾಗಿ ಹೋಗಿ ಎಂದಿದೆ. ನಾನು ಆಧ್ಯಾತ್ಮಿಕವಾಗಿ ಇರುವವನು. ಹೀಗಾಗಿ ನಿರ್ಮಾಪಕರ ಸಂಘಕ್ಕೆ ಸಲಹೆ ನೀಡಿದ್ದೆ. ಕೆಲವರಿಗೆ ದೇವರು ಅಂದ್ರೆ ಆಗಲ್ಲ. ಅಂಥವರಿಗೆ ನಾವು ಏನೂ ಮಾಡೋಕೆ ಆಗಲ್ಲ. ದೇವರನ್ನು ನಂಬುವವರ ಮತ್ತು ನಂಬದವರ ಬೆಳವಣಿಗೆ ಹೇಗಿದೆ ಎಂಬುವುದನ್ನು ಎಲ್ಲರೂ ನೋಡುತ್ತಿದ್ದಾರೆ ಎಂದು ಹೇಳಿದ್ದಾರೆ.
ಕಲಾವಿದರಿಗೆ ಇದು ಮಾತೃಸಂಸ್ಥೆ ಆಗಬೇಕು. ಬೇರೆ ರಾಜ್ಯಗಳಲ್ಲಿ ಇದೆ. ಎಲ್ಲ ಕಲಾವಿದರ ಸದಸ್ಯತ್ವ ನೋಂದಣಿ ಮಾಡಿಸುವ ಕೆಲಸ ಆಗಬೇಕು. ಆಗ ಹಬ್ಬದ ವಾತಾವರಣ ಸೃಷ್ಟಿ ಆಗಲಿ ಎಂದು ಹೇಳಿದ್ದಾರೆ.