ಬೆಂಗಳೂರು: ಷೇರು ಮಾರುಕಟ್ಟೆಯು ದಿಢೀರನೆ ಕುಸಿಯುವುದರಿಂದ ಹೆಚ್ಚಿನ ಜನ ಮ್ಯೂಚುವಲ್ ಫಂಡ್ ಗಳಲ್ಲಿ ಹೂಡಿಕೆ ಮಾಡುತ್ತಿದ್ದಾರೆ. ಇನ್ನು ಮ್ಯೂಚುವಲ್ ಫಂಡ್ ಗಳಲ್ಲಿ ಮಾಸಿಕ ಮಾತ್ರವಲ್ಲ, ತ್ರೈಮಾಸಿಕ, ಅರ್ಧವಾರ್ಷಿಕ ಹಾಗೂ ವಾರ್ಷಿಕವಾಗಿಯೂ ಹೂಡಿಕೆ ಮಾಡಬಹುದು. ಹೀಗೆ, ವರ್ಷಕ್ಕೆ 1 ಲಕ್ಷ ರೂಪಾಯಿಯನ್ನು ಮ್ಯೂಚುವಲ್ ಫಂಡ್ ನಲ್ಲಿ ಹೂಡಿಕೆ ಮಾಡಿ, 30 ಲಕ್ಷ ರೂಪಾಯಿಯನ್ನು ಹೇಗೆ ಗಳಿಸಬಹುದು ಎಂಬುದರ ಲೆಕ್ಕಾಚಾರ ಇಲ್ಲಿದೆ.
ಮ್ಯೂಚುವಲ್ ಫಂಡ್ ನಲ್ಲಿ ವರ್ಷಕ್ಕೆ 1 ಲಕ್ಷ ರೂಪಾಯಿಯಂತೆ 10 ವರ್ಷ ಹೂಡಿಕೆ ಮಾಡಿದರೆ, 10 ವರ್ಷದಲ್ಲಿ ಶೇ.12ರಷ್ಟು ರಿಟರ್ನ್ಸ್ ಎಂದುಕೊಂಡರೂ 31.05 ಲಕ್ಷ ರೂಪಾಯಿಯನ್ನು ಗಳಿಸಬಹುದಾಗಿದೆ. ಕೆಲವೊಂದು ಸಲ ರಿಟರ್ನ್ಸ್ ಪ್ರಮಾಣದಲ್ಲಿ ವ್ಯತ್ಯಾಸವಾಗುವುದೂ ಇದೆ. ಇದು ಹೆಚ್ಚಾಗಬಹುದು ಇಲ್ಲವೇ ಕಡಿಮೆಯೂ ಆಗಬಹುದು.
ಲಂಪ್ಸಮ್ ಅಮೌಂಟ್ ಅಂದರೆ, ಒಮ್ಮೆಯೇ 20 ಲಕ್ಷ ರೂಪಾಯಿಯನ್ನು ಹೂಡಿಕೆ ಮಾಡಿ, 20 ವರ್ಷಗಳವರೆಗೆ ಬಿಟ್ಟರೆ, ಅದು ಶೇ.12ರಷ್ಟು ರಿಟರ್ನ್ಸ್ ನೊಂದಿಗೆ 1.92 ಕೋಟಿ ರೂ. ಲಭಿಸುತ್ತದೆ. ಆದರೆ, ಎರಡೂ ಮಾದರಿಯ ಮ್ಯೂಚುವಲ್ ಫಂಡ್ ಗಳಲ್ಲಿ ರಿಸ್ಕ್ ಹೆಚ್ಚಿರುವುದರಿಂದ ಹೂಡಿಕೆದಾರರು ಎಚ್ಚರಿಕೆಯಿಂದ ಹಣ ತೊಡಗಿಸಬೇಕಾಗುತ್ತದೆ.
ದೀರ್ಘಾವಧಿಯವರೆಗೆ ಹೂಡಿಕೆ ಮಾಡುವುದರಿಂದ ಚಕ್ರಬಡ್ಡಿಯ ಲಾಭವನ್ನು ಪಡೆಯಬಹುದು, ಇದು ನಿಮ್ಮ ಹಣವು ವೇಗವಾಗಿ ಬೆಳೆಯಲು ಸಹಾಯ ಮಾಡುತ್ತದೆ. ಉದಾಹರಣೆಗೆ, ನೀವು ಮ್ಯೂಚುವಲ್ ಫಂಡ್ ಯೋಜನೆಯಲ್ಲಿ 1 ಲಕ್ಷ ರೂಪಾಯಿಗಳನ್ನು ವಾರ್ಷಿಕವಾಗಿ ಶೇ.12ರಷ್ಟು ರಿಟರ್ನ್ಸ್ ನೊಂದಿಗೆ ಹೂಡಿಕೆ ಮಾಡಿದರೆ 10 ವರ್ಷಗಳಲ್ಲಿ, ನಿಮ್ಮ ಹೂಡಿಕೆಯ ಮೌಲ್ಯ ಸುಮಾರು 31 ಲಕ್ಷ ರೂಪಾಯಿಗಳಾಗುತ್ತದೆ. 20 ವರ್ಷಗಳಲ್ಲಿ, ಅದು ಸುಮಾರು 96 ಲಕ್ಷ ರೂ. ಆಗುತ್ತದೆ.
ಗಮನಿಸಿ: ಮ್ಯೂಚುವಲ್ ಫಂಡ್ ನಲ್ಲಿ ರಿಸ್ಕ್ ಇರುತ್ತದೆ. ನಾವು ಇಲ್ಲಿ ನಿಮಗೆ ಕೇವಲ ಮಾಹಿತಿ ದೃಷ್ಟಿಯಿಂದ ಲೆಕ್ಕಾಚಾರ ನೀಡಿದ್ದೇವೆ. ರಿಟರ್ನ್ಸ್ ನಲ್ಲಿ ಏರುಪೇರಾಗುವ ಸಾಧ್ಯತೆ ಇರುವ ಕಾರಣ ಪ್ರತಿಯೊಬ್ಬರೂ ಇದನ್ನು ಮಾಹಿತಿ ದೃಷ್ಟಿಯಿಂದ ಮಾತ್ರ ಓದಬೇಕು. ಯಾವುದೇ ಮಾದರಿಯ ಹೂಡಿಕೆಗೂ ಮುನ್ನ ತಜ್ಞರ ಸಲಹೆ-ಸೂಚನೆಗಳನ್ನು ಪಡೆಯಬೇಕು.