ಬೆಂಗಳೂರು: ಸರ್ಕಾರಿ ನೌಕರಿಯಲ್ಲಿ ಇರುವುದಿಲ್ಲ. ಸಂಘಟಿತ ವಲಯದಲ್ಲಿಯೂ ಕೆಲಸ ಮಾಡುತ್ತಿಲ್ಲ. ಆದರೆ, 60 ವರ್ಷದ ಬಳಿಕ ಮಾಸಿಕ ಪಿಂಚಣಿ ಪಡೆಯಬೇಕು ಎಂದುಕೊಂಡಿದ್ದರೆ, ಕೇಂದ್ರ ಸರ್ಕಾರದ ಅಟಲ್ ಪಿಂಚಣಿ ಯೋಜನೆ ನೆರವಿಗೆ ಬರುತ್ತದೆ. 18-40 ವರ್ಷದೊಳಗಿನವರು ಈಗಿನಿಂದಲೇ ಹೂಡಿಕೆ ಮಾಡಲು ಆರಂಭಿಸಿದರೆ, ನಿವೃತ್ತಿ ನಂತರ ಪಿಂಚಣಿ ಪಡೆಯಬಹುದಾಗಿದೆ.
ಅಟಲ್ ಪಿಂಚಣಿ ಯೋಜನೆಯು ಕೇಂದ್ರ ಸರ್ಕಾರ ಪ್ರಾರಂಭಿಸಿದ ಸಾಮಾಜಿಕ ಭದ್ರತಾ ಯೋಜನೆಯಾಗಿದೆ. ಇದು ದೇಶದ ಎಲ್ಲ ನಾಗರಿಕರಿಗೆ 60 ವರ್ಷದ ನಂತರ ಸ್ಥಿರ ಆದಾಯವನ್ನು ಒದಗಿಸುತ್ತದೆ. ಅಸಂಘಟಿತ ವಲಯದಲ್ಲಿ ಕೆಲಸ ಮಾಡುವ ಕೆಲಸಗಾರರು, ವಿತರಣಾ ಕಾರ್ಮಿಕರು, ತೋಟಗಾರರು ಮುಂತಾದವರ ಮೇಲೆ ಕೇಂದ್ರೀಕರಿಸಿದ ಪಿಂಚಣಿ ಯೋಜನೆಯಾಗಿದೆ.
ಉದಾಹರಣೆಗೆ ನೀವು 18 ವರ್ಷದೆವರಾಗಿದ್ದು, ಅಟಲ್ ಪಿಂಚಣಿ ಯೋಜನೆ ಆಯ್ಕೆ ಮಾಡಿಕೊಂಡಿದ್ದೀರಿ ಎಂದಿಟ್ಟುಕೊಳ್ಳಿ. ಸುಮಾರು 42 ವರ್ಷಗಳ ಕಾಲ ತಿಂಗಳಿಗೆ 210 ರೂಪಾಯಿ ಪಾವತಿಸಿದರೆ, 60 ವರ್ಷಗಳ ನಂತರ ಮಾಸಿಕ 5 ಸಾವಿರ ರೂ. ಪಿಂಚಣಿ ಲಭಿಸುತ್ತದೆ. ಒಬ್ಬ ವ್ಯಕ್ತಿಯು ಮಾಸಿಕವಾಗಿ ಹೂಡಿಕೆ ಮಾಡುವ ಮೊತ್ತದ ಆಧಾರದ ಮೇಲೆ ಪಿಂಚಣಿ ದೊರೆಯುತ್ತದೆ.
ಅಟಲ್ ಪಿಂಚಣಿ ಯೋಜನೆ ಅಡಿಯಲ್ಲಿ, ಚಂದಾದಾರರ ಕೊಡುಗೆಗಳನ್ನು ಅವಲಂಬಿಸಿ 60 ವರ್ಷ ವಯಸ್ಸಿನ ನಂತರ ಮಾಸಿಕ 1 ಸಾವಿರ ರೂ.ನಿಂದ 5 ಸಾವಿರ ರೂ.ವರೆಗೆ ಪಿಂಚಣಿ ದೊರೆಯುತ್ತದೆ. ಅವಧಿಗೆ ಮೊದಲು ವಿತ್ ಡ್ರಾ ಮಾಡಲು ಆಗುವುದಿಲ್ಲ. ಸಾವು ಅಥವಾ ಮಾರಕ ಕಾಯಿಲೆಯಂತಹ ಸಂದರ್ಭಗಳಲ್ಲಿ ಮಾತ್ರ ಚಂದಾದಾರರು ಅಥವಾ ನಾಮಿನಿಯು ಸಂಪೂರ್ಣ ಮೊತ್ತವನ್ನು ಮರಳಿ ಪಡೆಯಬಹುದು. ಯೋಜನೆಗೆ ಕನಿಷ್ಠ 20 ವರ್ಷಗಳವರೆಗೆ ಕೊಡುಗೆಗಳನ್ನು ನೀಡಬೇಕು.
ಅರ್ಜಿ ಸಲ್ಲಿಸುವುದು ಹೇಗೆ?
- https://enps.nsdl.com/eNPS/NationalPensionSystem.html ವೆಬ್ ಸೈಟ್ ಗೆ ಭೇಟಿ ನೀಡಿ .
- ಅಟಲ್ ಪಿಂಚಣಿ ಯೋಜನೆ ಟ್ಯಾಬ್ಗೆ ಹೋಗಿ APY ನೋಂದಣಿಯ ಮೇಲೆ ಕ್ಲಿಕ್ ಮಾಡಿ.
- ಹೊಸ ನೋಂದಣಿ ಫಾರ್ಮ್ ಅನ್ನು ಭರ್ತಿ ಮಾಡಿ ಮತ್ತು ಕಂಟಿನ್ಯೂ ಮೇಲೆ ಕ್ಲಿಕ್ ಮಾಡಿ.
- ಫಾರ್ಮ್ ಭರ್ತಿ ಮಾಡಿ ಮತ್ತು ಕಂಪ್ಲೀಟ್ ಪೆಂಡಿಂಗ್ ರಿಜಿಸ್ಟ್ರೇಶನ್ನಲ್ಲಿ ಸಂಪೂರ್ಣ ವಿವರಗಳನ್ನು ಭರ್ತಿ ಮಾಡುವ ಮೂಲಕ KYC ಪೂರ್ಣಗೊಳಿಸಿ.
- ಇದರ ನಂತರ, ಒಂದು ಸ್ವೀಕೃತಿ ಸಂಖ್ಯೆ ಉತ್ಪತ್ತಿಯಾಗುತ್ತದೆ.
- 60 ವರ್ಷದ ನಂತರ ನಿಮಗೆ ಎಷ್ಟು ಪಿಂಚಣಿ ಬೇಕು ಎಂಬುದನ್ನು ಆರಿಸಿ.
- ನೀವು ಕಂತುಗಳನ್ನು ಹೇಗೆ ಪಾವತಿಸಲು ಬಯಸುತ್ತೀರಿ ಎಂಬುದನ್ನು ಸಹ ನೀವು ಆರಿಸಬೇಕಾಗುತ್ತದೆ. ( ಮಾಸಿಕ, ತ್ರೈಮಾಸಿಕ, ಅರ್ಧ-ವಾರ್ಷಿಕ ಅಥವಾ ವಾರ್ಷಿಕ)
- ಇದರ ನಂತರ, ನಾಮಿನಿ ಫಾರ್ಮ್ ಅನ್ನು ಸರಿಯಾಗಿ ಭರ್ತಿ ಮಾಡಿ.
- ಪ್ರಕ್ರಿಯೆಯನ್ನು ಪೂರ್ಣಗೊಳಿಸಿದ ನಂತರ, ನೀವು NSDL ವೆಬ್ಸೈಟ್ನಲ್ಲಿ eSign ಟ್ಯಾಬ್ ಅನ್ನು ತಲುಪುತ್ತೀರಿ.
- ಆಧಾರ್ OTP ನಮೂದಿಸಿದ ಬಳಿಕ ಅರ್ಜಿ ಸಲ್ಲಿಕೆಯಾಗುತ್ತದೆ
ಬೇಕಾಗುವ ದಾಖಲೆಗಳು
- ಜನನ ಪ್ರಮಾಣಪತ್ರ, ಎಸ್ಸೆಸ್ಸೆಲ್ಸಿ ಅಂಕಪಟ್ಟಿ, ಚಾಲನಾ ಪರವಾನಗಿ, ಆಧಾರ್ ಕಾರ್ಡ್ ಸೇರಿ ವಿವಿಧ ವಯಸ್ಸಿನ ಪುರಾವೆಗಳು.
- ಭಾರತೀಯ ಪೌರತ್ವ ಪ್ರಮಾಣಪತ್ರ
- ಬ್ಯಾಂಕ್ ಖಾತೆ ಸಂಖ್ಯೆ ಮತ್ತು ಶಾಖೆಯ ವಿವರಗಳು
- ಎಪಿವೈ ನೋಂದಣಿ ನಮೂನೆ
- ಆಧಾರ್ ಕಾರ್ಡ್