ಕೋಲಾರ: ಮದುವೆ ಆರತಕ್ಷತೆ ಮುಗಿಸಿಕೊಂಡು ಹಿಂತೆರುಳುತ್ತಿದ್ದ ಬಸ್ ನಿಯಂತ್ರಣ ತಪ್ಪಿ ಕಾಲುವೆಗೆ ಬಿದ್ದ ಪರಿಣಾಮ ಸುಮಾರು 30ಕ್ಕೂ ಹೆಚ್ಚು ಮಂದಿ ಗಾಯಗೊಂಡಿರುವ ಘಟನೆ ಕೋಲಾರ ತಾಲೂಕು ಸುಗಟೂರು ಗ್ರಾಮದ ಬಳಿ ಸಂಬವಿಸಿದೆ.
ಕೋಲಾರದ ವಧು ಹಾಗೂ ಚಿಕ್ಕಬಳ್ಳಾಪುರ ಜಿಲ್ಲೆಯ ವರನ ಮದುವೆ ಆರತಕ್ಷತೆ ಕೋಲಾರ ಹೊರವಲಯದ ರತ್ನ ಕಲ್ಯಾಣ ಮಂಟಪದಲ್ಲಿ ನಡೆಯುತ್ತಿತ್ತು. ಆರತಕ್ಷತೆಗೆ ಮೂರು ಖಾಸಗಿ ಬಸ್‌ಗಳಲ್ಲಿ ಬಂದಿದ್ದ ಜನರು ಆರತಕ್ಷತೆ ಮುಗಿಸಿಕೊಂಡು ಸಂಭ್ರಮದಿಂದ ಚಿಕ್ಕಬಳ್ಳಾಪುರ ಜಿಲ್ಲೆ ಶಿಡ್ಲಘಟ್ಟ ತಾಲೂಕು ದಿಬ್ಬೂರಹಳ್ಳಿ ಗ್ರಾಮಕ್ಕೆ ವಾಪಸ್ಸಾಗುತ್ತಿದ್ದ ವೇಳೆ ಈ ಅವಘಡ ಸಂಭವಿಸಿದೆ.
ಬಸ್‌ನಲ್ಲಿ ಸುಮಾರು 55 ಮಂದಿ ಇದ್ದು, ಆ ಪೈಕಿ 30 ಜನರಿಗೆ ಗಾಯಗಳಾಗಿದೆ. ಹತ್ತು ಜನರಿಗೆ ಗಂಭೀರ ಗಾಯಗಳಾಗಿವೆ.ಅದೃಷ್ಟಾವಶಾತ್ ಜೀವಾಪಾಯದಿಂದ ಪಾರಾಗಿದ್ದಾರೆ. ಭೀಕರ ಅಪಘಾತದಲ್ಲಿ ಬಸ್ ಕಾಲುವೆಗೆ ಉರುಳಿದ ಪರಿಣಾಮ ಬಸ್ ನಲ್ಲಿದ್ದ ಬಹುತೇಕರು ನೀರಿಗೆ ಬಿದ್ದಿದ್ದಾರೆ. ಈ ಘಟನೆ ನಡೆದ ವೇಳೆ ಬಸ್‌ನಲ್ಲಿದ್ದ ಜನರು ಗಾಬರಿಯಾಗಿ ಕಿರುಚಾಡಿದ್ದಾರೆ. ಕೂಡಲೇ ಸ್ಥಳೀಯರು ಬಸ್‌ನಲ್ಲಿದ್ದ ಜನರನ್ನು ರಕ್ಷಣೆ ಮಾಡಿ ಕೂಡಲೇ ಗಾಯಳುಗಳನ್ನು ಕೋಲಾರದ ಜಿಲ್ಲಾಸ್ಪತ್ರೆಗೆ ದಾಖಲು ಮಾಡಿ ಚಿಕಿತ್ಸೆ ಕೊಡಿಸಿದ್ದಾರೆ. ಸ್ಥಳಕ್ಕೆ ಕೋಲಾರ ಗ್ರಾಮಾಂತರ ಠಾಣಾ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಕೆಲವು ಮಹಿಳೆಯರು ಮದುವೆಗೆಂದು ಹಾಕಿಕೊಂಡು ಬಂದಿದ್ದ ಚಿನ್ನದ ಒಡವೆ ಹಾಗೂ ಮೊಬೈಲ್‌ಗಳು ನೀರಿನಲ್ಲಿ ಬಿದ್ದಿವೆ ಎನ್ನಲಾಗಿದೆ.
ಸದ್ಯ ಅಪಘಾತದಿಂದ ಮದುವೆ ಮನೆಯಲ್ಲಿ ಆತಂಕದ ವಾತಾವರಣ ಸೃಷ್ಟಿಯಾಗಿದ್ದು ಮದುವೆಯ ಸಂಭ್ರಮದಲ್ಲಿದ್ದ ಸಂಬಂಧಿಗಳು ಆಸ್ಪತ್ರೆಗೆ ಬಂದು ಗಾಯಾಳುಗಳ ಆರೋಗ್ಯ ವಿಚಾರಿಸಿದ್ದಾರೆ.