ಬೆಂಗಳೂರು: ಆರಿದ್ರಾ ಆರ್ಭಟಕ್ಕೆ ಕರುನಾಡಿನ ಹಲವೆಡೆ ಜನ- ಜೀವನ ಸಂಪೂರ್ಣ ಅಸ್ತವ್ಯಸ್ಥಗೊಂಡಿದ್ದು, ಜೂ. 27ರಂದು ಕೂಡ ಕೊಡಗು ಹಾಗೂ ಚಿಕ್ಕಮಗಳೂರು ಜಿಲ್ಲೆಯಲ್ಲಿನ ಶಾಲಾ-ಕಾಲೇಜುಗಳಿಗೆ ರಜೆ ಘೋಷಿಸಲಾಗಿದೆ.
ಮಲೆನಾಡು, ಕರಾವಳಿ ಸೇರಿದಂತೆ ಉತ್ತರ ಒಳನಾಡಿನ ಹಲವೆಡೆ ವ್ಯಾಪಕವಾಗಿ ಮಳೆಯಾಗುತ್ತಿದೆ. ಹೀಗಾಗಿ ಹಲವೆಡೆ ಜನ- ಜೀವನ ಅಸ್ತವ್ಯಸ್ಥಗೊಂಡಿದೆ. ವ್ಯಾಪಕ ಮಳೆಗೆ ರೈತ ಕೂಡ ಚಿಂತಾಕ್ರಾಂತನಾಗಿದ್ದಾನೆ. ಕೊಡಗು (Kodagu) ಜಿಲ್ಲೆಯಲ್ಲಿ ಧಾರಕಾರ ಮಳೆಯಾಗುತ್ತಿದ್ದು, ಜಿಲ್ಲೆಯ ಎಲ್ಲಾ ಅಂಗನವಾಡಿ, ಪ್ರಾಥಮಿಕ ಮತ್ತು ಪ್ರೌಢಶಾಲೆ ಹಾಗೂ ಪದವಿ ಪೂರ್ವ ಕಾಲೇಜಿಗೆ ಶುಕ್ರವಾರ ರಜೆ ಘೋಷಿಸಿ ಜಿಲ್ಲಾಧಿಕಾರಿ ವೆಂಕಟ ರಾಜ ಅದೇಶ ಹೊರಡಿಸಿದ್ದಾರೆ.
ಅಲ್ಲದೇ, ಚಿಕ್ಕಮಗಳೂರಿನ 5 ತಾಲೂಕುಗಳಲ್ಲಿ ಅಂಗನವಾಡಿ, ಪ್ರಾಥಮಿಕ ಹಾಗೂ ಪ್ರೌಢ ಶಾಲೆಗಳಿಗೆ ರಜೆ ಘೋಷಿಸಲಾಗಿದೆ. ಮೂಡಿಗೆರೆ, ಶೃಂಗೇರಿ, ಕೊಪ್ಪ, ಎನ್.ಆರ್.ಪುರ ಹಾಗೂ ಕಳಸ ತಾಲೂಕಿನಲ್ಲಿ ರಜೆ ಘೋಷಿಸಿ ಜಿಲ್ಲಾಧಿಕಾರಿ ಮೀನಾ ನಾಗರಾಜ್ ಆದೇಶ ಹೊರಡಿಸಿದ್ದಾರೆ. ಮಲೆನಾಡು ಪ್ರದೇಶ ಸೇರಿದಂತೆ ಕಾವೇರಿ ಜಲಾನಯನ ಪ್ರದೇಶದಲ್ಲಿ ವ್ಯಾಪಕ ಮಳೆಯಿಂದಾಗಿ ಕೆಆರ್ಎಸ್ ಜಲಾಶಯಕ್ಕೆ 45 ಸಾವಿರಕ್ಕೂ ಅಧಿಕ ಕ್ಯೂಸೆಕ್ ನೀರು ಹರಿದು ಬರುತ್ತಿದೆ. ಹೀಗಾಗಿ ಕೆಆರ್ಎಸ್ ಭರ್ತಿಗೆ ಕೇವಲ ನಾಲ್ಕೇ ಅಡಿ ಬಾಕಿ ಇದೆ.