ನವದೆಹಲಿ: ಪಹಲ್ಗಾಮ್ ಭಯೋತ್ಪಾದಕ ದಾಳಿಯ(Pahalgam Attack) ಬಳಿಕ ಭಾರತ ಮತ್ತು ಪಾಕಿಸ್ತಾನದ ನಡುವೆ ಬಿಕ್ಕಟ್ಟು ಹಾಗೂ ಗಡಿಯಲ್ಲಿ ಉದ್ವಿಗ್ನತೆ ಸೃಷ್ಟಿಯಾಗಿರುವಂತೆಯೇ ಬಾಂಗ್ಲಾದೇಶ ಮತ್ತು ಮ್ಯಾನ್ಮಾರ್ ಗಡಿಗಳಲ್ಲಿ ಹೆಚ್ಚಿನ ಎಚ್ಚರಿಕೆ ವಹಿಸುವಂತೆ ಗುಪ್ತಚರ ಸಂಸ್ಥೆಗಳು ಮತ್ತು ಭದ್ರತಾ ಪಡೆಗಳಿಗೆ ಸೂಚಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.
ಮುಹಮ್ಮದ್ ಯೂನುಸ್ ನೇತೃತ್ವದ ಬಾಂಗ್ಲಾದೇಶದ ಮಧ್ಯಂತರ ಸರ್ಕಾರದ ಕ್ರಮಗಳು ಮತ್ತು ಬಾಂಗ್ಲಾದಲ್ಲಿ ಪಾಕಿಸ್ತಾನದ ಐಎಸ್ಐ ಮತ್ತು ಪಾಕಿಸ್ತಾನದ ಮಿಲಿಟರಿ ಅಧಿಕಾರಿಗಳ ಉಪಸ್ಥಿತಿ ಹೆಚ್ಚುತ್ತಿರುವುದನ್ನು ಗಮನದಲ್ಲಿಟ್ಟುಕೊಂಡು ಬಾಂಗ್ಲಾದೇಶ ಗಡಿಯುದ್ದಕ್ಕೂ ಹೆಚ್ಚಿನ ನಿಗಾ ವಹಿಸುವಂತೆ ಭದ್ರತಾ ಸಂಸ್ಥೆಗಳಿಗೆ ಸೂಚಿಸಲಾಗಿದೆ.
ಪಾಕಿಸ್ತಾನವು ಇತ್ತೀಚಿನ ದಿನಗಳಲ್ಲಿ ಬಾಂಗ್ಲಾದೇಶ ಸರ್ಕಾರದೊಂದಿಗೆ ಹಾಗೂ ಅಲ್ಲಿನ ತೀವ್ರಗಾಮಿ ಇಸ್ಲಾಮಿಕ್ ಸಂಘಟನೆಗಳೊಂದಿಗೆ ಸಂಬಂಧವನ್ನು ಬಲಪಡಿಸಲು ಪ್ರಯತ್ನಿಸುತ್ತಿದೆ.
ಬಾಂಗ್ಲಾದೇಶದ ಗಡಿಯಲ್ಲಿರುವ ಭಾರತೀಯ ಪ್ರದೇಶಗಳಲ್ಲಿ ಬಾಂಗ್ಲಾದ ತೀವ್ರಗಾಮಿ ಗುಂಪುಗಳಿಗೆ ಹೆಚ್ಚಿನ ಬೆಂಬಲವೂ ಇದ್ದು, ಈ ತೀವ್ರಗಾಮಿ ಶಕ್ತಿಗಳನ್ನು ಪಾಕಿಸ್ತಾನವು ಉಭಯ ದೇಶಗಳ ನಡುವೆ ಎದ್ದಿರುವ ಹಗೆತನದ ಬೆಂಕಿಗೆ ತುಪ್ಪ ಸುರಿಯಲು ಬಳಸಬಹುದು. ಆ ಮೂಲಕ ಭಾರತಕ್ಕೆ ತೊಂದರೆ ಸೃಷ್ಟಿಸಬಹುದು ಎಂಬ ಶಂಕೆಯ ಮೇರೆಗೆ ಈ ಕ್ರಮ ಕೈಗೊಳ್ಳಲಾಗಿದೆ.
ವಕ್ಫ್ ಕಾನೂನಿನ ವಿರುದ್ಧದ ಪ್ರತಿಭಟನೆಯ ಸಮಯದಲ್ಲಿ ಪಶ್ಚಿಮ ಬಂಗಾಳದ ಮುರ್ಷಿದಾಬಾದ್‌ನಲ್ಲಿ ನಡೆದ ಗಲಭೆಯ ನಂತರ ಬಾಂಗ್ಲಾದೇಶ ಗಡಿಯಲ್ಲಿನ ಪರಿಸ್ಥಿತಿಯನ್ನು ಭಾರತೀಯ ಏಜೆನ್ಸಿಗಳು ಸಕ್ರಿಯವಾಗಿ ಮೇಲ್ವಿಚಾರಣೆ ನಡೆಸುತ್ತಿವೆ.
ಬಾಂಗ್ಲಾದೇಶದ ಗಡಿಯಲ್ಲಿರುವ ಮುರ್ಷಿದಾಬಾದ್ ಜಿಲ್ಲೆಯಲ್ಲಿ ನಡೆದ ಹಿಂಸಾಚಾರದಲ್ಲಿ ಮೂವರು ಸಾವಿಗೀಡಾಗಿ, ನೂರಾರು ಜನರು ಗಾಯಗೊಂಡಿದ್ದರು. ಬಾಂಗ್ಲಾದೇಶದ ದುಷ್ಕರ್ಮಿಗಳು ಬಂಗಾಳದಲ್ಲಿ ಹಿಂಸಾಚಾರಕ್ಕೆ ಪ್ರಚೋದನೆ ನೀಡಿದ್ದರು ಎಂದು ಕೇಂದ್ರ ಸರ್ಕಾರಕ್ಕೆ ಸಲ್ಲಿಸಿದ ವರದಿಯಲ್ಲಿ ತಿಳಿಸಲಾಗಿತ್ತು.
ಪಹಲ್ಗಾಮ್‌ನಲ್ಲಿ 26 ಜನರ ಸಾವಿಗೆ ಕಾರಣವಾದ ಉಗ್ರರ ದಾಳಿಯ ನಂತರ ಭಾರತವು ಪ್ರತೀಕಾರ ತೀರಿಸಬಹುದು ಎಂಬ ಆತಂಕ ಪಾಕಿಸ್ತಾನಕ್ಕಿದೆ. ಇದರ ನಡುವೆಯೇ ಗಡಿಯಲ್ಲೂ ಉದ್ವಿಗ್ನತೆ ಹೆಚ್ಚುತ್ತಿದ್ದು, ಈ ಹಿನ್ನೆಲೆಯಲ್ಲಿ ದೇಶದ ಪೂರ್ವ ಗಡಿಯಲ್ಲಿ ಹೈ ಅಲರ್ಟ್ ಘೋಷಿಸಲಾಗಿದೆ.
ಈಗಾಗಲೇ ಭಾರತದೊಂದಿಗಿನ ಗಡಿಯುದ್ದಕ್ಕೂ ಪಾಕಿಸ್ತಾನವು ತನ್ನ ಸೈನ್ಯವನ್ನು ಸಜ್ಜುಗೊಳಿಸಲು ಪ್ರಾರಂಭಿಸಿದೆ ಮತ್ತು ತನ್ನ ನೌಕಾಪಡೆಯನ್ನು ಸನ್ನದ್ಧ ಸ್ಥಿತಿಯಲ್ಲಿರಿಸಿದೆ ಎಂದು ಮೂಲಗಳು ತಿಳಿಸಿವೆ. ಇನ್ನೊಂದೆಡೆ ನಿರಂತರವಾಗಿ ಕದನ ವಿರಾಮವನ್ನು ಉಲ್ಲಂಘಿಸುವ ಮೂಲಕ ಪಾಕಿಸ್ತಾನವು ನಿಯಂತ್ರಣ ರೇಖೆಯ ಉದ್ದಕ್ಕೂ ಅಪ್ರಚೋದಿತ ಗುಂಡಿನ ದಾಳಿಯನ್ನು ಮುಂದುವರಿಸಿದೆ.