ಹಾಸನ: ಕಳೆದ ಮೂರು ದಿನಗಳಿಂದ ಮಲೆನಾಡು ಭಾಗದಲ್ಲಿ ಭಾರೀ ಮಳೆಯಾಗುತ್ತಿದ್ದು, ವಾಸದ ಮನೆಯ ಗೋಡೆಗಳು ಕುಸಿದು ಬಿದ್ದಿರುವ ಘಟನೆ ಹಾಸನ ಜಿ. ಆಲೂರು ತಾ. ಮಗ್ಗೆ ಹೋಬಳಿಯ ಬಡಗಿ ಕೊಪ್ಪಲು ಗ್ರಾಮದಲ್ಲಿ ನಡೆದಿದೆ.
ಅದೃಷ್ಟವಶಾತ್ ಮನೆಯಲ್ಲಿದ್ದವರು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಬೆಳಿಗ್ಗಿನ ಜಾವ 4.30ರಲ್ಲಿ ಈ ಘಟನೆ ನಡೆದಿದೆ. ಪ್ರಶಾಂತ್ ಎಂಬುವರಿಗೆ ಸೇರಿದ ವಾಸದ ಮನೆ ಇದಾಗಿದೆ. ಇದ್ದ ಮನೆ ಕಳೆದುಕೊಂಡ ಕುಟುಂಬ ಈಗ ಕಂಗಾಲಾಗಿದೆ. ಸರ್ಕಾರದಿಂದ ಸೂಕ್ತ ಪರಿಹಾರ ಒದಗಿಸುವಂತೆ ಕುಟುಂಬಸ್ಥರು ಸರ್ಕಾರಕ್ಕೆ ಮನವಿ ಮಾಡಿದ್ದಾರೆ.